ಜೀವರಸಾಯನವಿಜ್ಞಾನ

ಜೀವಿಗಳಲ್ಲಿರುವ ಪದಾರ್ಥಗಳು, ಇವು ಜೀವಿಗಳ ಒಳಹೋಗುವ ಅಥವಾ ಅವುಗಳಲ್ಲಿ ರೂಪತಳೆಯುವ ಮತ್ತು ಪರಸ್ಪರ ಹಾಗೂ ಪರಿಸರದೊಡನೆ ಪ್ರತಿಕ್ರಿಯಿಸುವ ಪ್ರಕ್ರಿಯೆಗಳ, ಪದಾರ್ಥಗಳನ್ನೂ ಪ್ರಕ್ರಿಯೆಗಳನ್ನು ಪತ್ತೆಮಾಡಿ ಲಕ್ಷಣೀಕರಿಸಿ ಮಾಪಿಸುವ ವಿಧಾನಗಳು-ಇವುಗಳ ಅಧ್ಯಯನ (ಬಯೋಕೆಮಿಸ್ಟ್ರಿ). ವಿಕಾಸದ ದೃಷ್ಟಿಯಿಂದ ಹೇಳುವುದಾದರೆ ಇದು ಜೀವ ಹಾಗೂ ರಸಾಯನ ವಿಜ್ಞಾನಗಳ ಸಂಗಮದಿಂದ ಜನಿಸಿ ಅವುಗಳ ಮತ್ತು ವೈದ್ಯ ಹಾಗೂ ಶರೀರಕ್ರಿಯಾವಿಜ್ಞಾನಗಳ ನೆರವಿನಿಂದ ವಿಶೇಷವಾಗಿ ವರ್ಧಿಸಿ ಇಂದು ಸ್ವತಂತ್ರ ಅಸ್ತಿತ್ವವನ್ನೇ ಪಡೆದಿರುವ ವಿಜ್ಞಾನ ಪ್ರಕಾರ. ಜೀವ ಕಾರ್ಯಗಳನ್ನು ರಸಾಯನವಿಜ್ಞಾನದ ಮಾರ್ಗ ಮತ್ತು ರೀತಿಯಲ್ಲಿ ಅರ್ಥವಿರುವುದೇ ಜೀವರಸಾಯನದ ದೃಷ್ಟಿ.
ಪ್ರಸಕ್ತ ಲೇಖನವನ್ನು ಈ ಮುಂದಿನ ಪ್ರಧಾನ ಶೀರ್ಷಿಕೆಗಳ ಅಡಿಯಲ್ಲಿ ವಿಸದೀಕರಿಸಿದೆ;
ಪ್ರಸ್ತಾವನೆ
ಇತಿಹಾಸ
ಬೆಳೆವಣಿಗೆ
ಜೀವರಾಸಾಯನಿಕಗಳು
ಕಿಣ್ವವಿಜ್ಞಾನ
ಶಕ್ತಿವ್ಯವಹಾರ
ಅಣ್ವಕ ದೃಷ್ಟಿಯಿಂದ ವಿಕಾಸಪಥ

1 ಪ್ರಸ್ತಾವನೆ : ಜೀವಿಯ ಮೂಲ ಜೀವಕೋಶ. ಸ್ಥೂಲ ದೃಷ್ಟಿಯಲ್ಲಿ ಇದು ಅನೇಕ ರಾಸಾಯನಿಕಗಳನ್ನು ಒಳಗೊಂಡ ಒಂದು ಚೀಲ. ಇದಾದರೂ ಆಗಿರುವುದು ಹಲವಾರು ರಾಸಾಯನಿಕಗಳಿಂದಲೇ. ಕೋಶ ಮತ್ತು ಅದರ ಘಟಕಗಳಲ್ಲಿ ರಾಸಾಯನಿಕ ದ್ರಾವಣ ಉಂಟು. ಇಂಥ ರಾಸಾಯನಿಕಗಳಲ್ಲಿ ಮುಖ್ಯವಾದ ಗುಂಪುಗಳೆಂದರೆ ಪ್ರೋಟೀನುಗಳು, ಕಾರ್ಬೊಹೈಡ್ರೇಟುಗಳು ಕೊಬ್ಬು ಮತ್ತು ಅದರ ಗುಂಪಿಗೆ ಸೇರಿದ ಲಿಪಿಡ್ಡುಗಳು. ಇವಲ್ಲದೆ ನ್ಯೂಕ್ಲಿಯಿಕ್ ಆಮ್ಲಗಳು, ಜೀವಸತ್ತ್ವಗಳು, ಲವಣಗಳು ಮುಂತಾದ ಹಲವಾರು ರಾಸಾಯನಿಕಗಳೂ ಕೋಶದಲ್ಲಿನ ದ್ರಾವಣದಲ್ಲಿ ಇವೆ. ಒಂದು ಜೀವಿ ಅಥವಾ ಪ್ರಾಣಿ ಈ ರೀತಿಯ ಕೋಟ್ಯಂತರ ಕೋಶಗಳಿಂದ ಆಗಿದೆ. ಆದರೂ ಜೀವ ಕಾರ್ಯಗಳ, ಅಂದರೆ ಬೆಳೆವಣಿಗೆ, ಸಂತಾನೋತ್ಪತ್ತಿ, ಚಲನೆ ಮುಂತಾದ ಕಾರ್ಯಗಳ ಮೂಲವು ಕೋಶಗಳಲ್ಲಿ ನಡೆಯುವ ರಸಾಯನ ಕಾರ್ಯಗಳ ಸಮುದಾಯ ಎಂದು ಭಾವಿಸಬಹುದು. ಅಂದಮಾತ್ರಕ್ಕೆ ಜೀವಿಯೊಂದು ರಸಾಯನಕಾರ್ಯಗಳ ಸಂಕಲನ ಎಂದು ಸಮರೋಪಿಸುವುದು ಸರಿ ಆಗದು. ಏಕೆಂದರೆ ಜೀವಿಗೆ ಗುರಿಯುಂಟು. ರಸಾಯನ ಕಾರ್ಯಗಳು ಈ ಗುರಿಯ ಸಾಧನೆಯಲ್ಲಿ ಪರ್ಯವಸಾನವಾಗಬೇಕು. ಇದು ಸಾಧ್ಯವಾಗಬೇಕಾದರೆ ರಸಾಯನ ಕಾರ್ಯಗಳು ಸರಿಯಾಗಿ, ಸರಿಯಾದ ಕಾಲದಲ್ಲಿ ಸರಿಯಾದ ವೇಗದಲ್ಲಿ ನಡೆಯಬೇಕು; ಮತ್ತು ಈ ರೀತಿ ನಡೆಸುವ ವ್ಯವಸ್ಥೆಗೆ ಇರಬೇಕು. ಇಂಥ ವ್ಯವಸ್ಥೆಗೆ ಬೇಕಾದ ಹತೋಟಿಯ ಏರ್ಪಾಡು ಮಿದುಳು ಮತ್ತು ನರಮಂಡಲಗಳ ಅಧೀನದಲ್ಲಿದೆ. ಈ ವ್ಯವಸ್ಥೆಯ ಮೂಲವೂ ರಸಾಯನವಸ್ತುಗಳೇ ಆಗಿವೆ. ಇದರಲ್ಲಿ ಪಾಲುಗೊಂಡಿರುವ ಹಾರ್ಮೋನುಗಳೂ ರಸಾಯನವಸ್ತುಗಳೇ. ಅಂತೆಯೇ ಕೋಶದಲ್ಲಿ ಕೋಶಗಳಿಂದ ನಡೆಯುವ ರಸಾಯನಕ್ರಿಯೆಗಳ ಅಧ್ಯಯನವೇ ಜೀವರಸಾಯನ ವಿಜ್ಞಾನವಾಗಿದೆ. ಬೇರೆ ಹೆಸರುಗಳಿಂದಲೂ ಇದನ್ನು ಕರೆಯುವುದುಂಟು; ದೇಹಕ್ರಿಯಾರಸಾಯನವಿಜ್ಞಾನ, ಅಣ್ವಕಜೀವವಿಜ್ಞಾನ, ಇತ್ಯಾದಿ. ಈ ರೀತಿ ಬೇರೆ ಬೇರೆ ಹೆಸರುಗಳಿರಲು ಕಾರಣ ಈ ಶಾಸ್ತ್ರದ ವ್ಯಾಪ್ತಿ.

2 ಇತಿಹಾಸ : ಜೀವಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ, ಅಥವಾ ರೋಗಗಳನ್ನು ಅರ್ಥಮಾಡಿಕೊಂಡು ವಾಸಿ ಮಾಡಲು ಪ್ರಯತ್ನಿಸಿದಾಗ, ಅಥವಾ ಮದ್ಯದ ತಯಾರಿಕೆ ಪ್ರಾರಂಭಿಸಿದಾಗ ಜೀವರಸಾಯನ ವಿಜ್ಞಾನದ ಜನನ ಆಯಿತಾದರೂ ಇದಕ್ಕೆ ಒಂದು ಸ್ಪಷ್ಟ ರೂಪ ದೊರೆತದ್ದು 18ನೆಯ ಶತಮಾನದ ಕೊನೆಯಲ್ಲಿ ಮಾತ್ರ. ಈ ಶಾಸ್ತ್ರದ ಬೆಳೆವಣಿಗೆಗೆ ಹೆಚ್ಚು ಪ್ರಭಾವ ಬೀರಿದವರಲ್ಲಿ ಮುಖ್ಯರು ಸಿ.ಡಬ್ಲ್ಯು. ಷೀಲೇ (1742-86), ಬರ್‍ಜಿûೀಲಿಯಸ್ (1779-1848), ಜಿ. ಫಾನ್ ಲೀಬಿಗ್ (1803-73). ಲೀಬಿಗ್ಗನು ಜೀವರಸಾಯನವಿಜ್ಞಾನದ ಪ್ರಯೋಗಶಾಲೆಯನ್ನು ಗೀಸನ್ನಿನಲ್ಲಿ ಪ್ರಾರಂಭಿಸಿದ. ಪ್ರಕೃತಿಯಲ್ಲಿನ ರಸಾಯನ ವರ್ತುಲಗಳನ್ನು ಆವಿಷ್ಕರಿಸಿದ. ದ್ಯುತಿಸಂಶ್ಲೇಷಣೆ ಭೂಮಿಯಲ್ಲಿ ನಡೆಯದಿದ್ದರೆ ಪ್ರಾಣಿಗಳು ಇಲ್ಲಿ ಬದುಕಿರಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ. ಅವು ನೇರವಾಗಿ ಅಥವಾ ಪರೋಕ್ಷವಾಗಿ ಸಸ್ಯಗಳನ್ನು ಆಹಾರಕ್ಕಾಗಿ ಅವಲಂಬಿಸಿರುತ್ತವೆ. ಅವು ಜೀವಿಸಿರುವಾಗ ವಿಸರ್ಜಿಸಿದ ರಸಾಯನವಸ್ತುಗಳೂ ಅನಂತರ ಅವುಗಳ ದೇಹಗಳೂ ಪೂರ್ಣವಾಗಿ ಭೂಮಿಯನ್ನು ಸೇರಿ ಬದಲಾವಣೆ ಹೊಂದಿ ಗೊಬ್ಬರವಾಗುತ್ತವೆ. ಇದನ್ನು ಸಸ್ಯ ಬಳಸಿಕೊಂಡು ಬೆಳೆಯುವುದು. ಹೀಗೆ ಸಸ್ಯದಿಂದ ಪ್ರಾಣಿ, ಪ್ರಾಣಿಯಿಂದ ಸಸ್ಯ ಎಂಬ ಪ್ರಕೃತ್ತಿಯಲ್ಲಿನ ವರ್ತುಲತೆಯನ್ನು ಲೀಬಿಗ್ ಪ್ರತಿಪಾದಿಸಿದ. ಮದ್ಯ ತಯಾರಿಕೆ, ಕೊಳೆತ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ಇವೆಲ್ಲವುಗಳಲ್ಲಿಯೂ ಏನೊ ಸಂಬಂಧ ಉಂಟು ಎಂದು ಆತ ಒಪ್ಪಿದ್ದರೂ ಜೀವಾಣುಗಳು ಇವುಗಳ ಹಿನ್ನಲೆಯಲ್ಲಿ ಇರಬಹುದು ಎಂಬುದನ್ನು ಸ್ವತಃ ಲೀಬಿಗ್ಗನೂ ನಂಬಿರಲಿಲ್ಲ. ಮುಂದೆ ಲೂಯಿ ಪಾಸ್ತರ್ (1822-95) ಈ ಬದಲಾವಣೆಗಳೆಲ್ಲವೂ ಅಣುಜೀವಿಗಳಿಂದ ಎಂಬುದನ್ನು ಸಾಧಿಸಿ ಅಣುಜೀವಿವಿಜ್ಞಾನವನ್ನು ಪ್ರವರ್ತಿಸಿ ಬೆಳೆಸಿದ.

ಜೀವರಸಯನಕ್ರಿಯವಿನ್ಯಾಸಗಳ ಅಧ್ಯಯನಕ್ಕೆ ಬುನಾದಿ ಹಾಕಿದಾತ ಲವಾಸ್ಯೆ (1743-94). ಜಾನ್ ಮೆಯೋ ಎಂಬಾತ ಪ್ರಾಣಿಗಳ ಉಸಿರಾಟದಲ್ಲಿ ನಡೆಯುವ ರಸಾಯನ ಕಾರ್ಯಕ್ಕೂ ರಸಾಯನ ವಸ್ತುಗಳ ಉತ್ಕರ್ಷಣ ಕಾರ್ಯಕ್ಕೂ ಇರುವ ಸಾದೃಶ್ಯವನ್ನು ತೋರಿಸಿದ್ದ. ಲವಾಸ್ಕೆ ತನ್ನ ನಿರ್ದಿಷ್ಟ ಪ್ರಯೋಗಗಳಿಂದ, ಉಸಿರಾಟದಲ್ಲಿ ನಡೆಯುವ ರಸಾಯನ ಕಾರ್ಯ ಉತ್ಕರ್ಷಣ ಕಾರ್ಯ ಎಂಬುದನ್ನು ಸ್ಪಷ್ಟಪಡಿಸಿದ. ಅಲ್ಲದೆ ಶಕ್ತಿ ಹೇಗೆ ಬಿಡುಗಡೆಯಾಗುತ್ತದೆ ಎಂಬುದನ್ನು ಕೂಡ ಶೋಧಿಸಿದ. 18ನೆಯ ಶತಮಾನದ ಕೊನೆಯ ವೇಳೆಗೆ ಆಗಿನ ವಿಜ್ಞಾನಿಗಳ ಮನಸ್ಸಿನಲ್ಲಿ ಓಡಾಡುತ್ತಿದ್ದ ಸಮಸ್ಯೆ ಎಂದರೆ ಸಸ್ಯಗಳಲ್ಲಿ ಆಗುವ ದ್ಯುತಿಸಂಶ್ಲೇಷಣೆ ಮತ್ತು ಪಿಷ್ಟ ಮುಂತಾದವುಗಳ ತಯಾರಿಕೆಯ ಮಾರ್ಗ. ಇದೂ ಉಸಿರಾಟದ ಕಾರ್ಯದಂತೆಯೇ. ಆದರೆ ವಿರುದ್ಧ ದಿಶೆಯಲ್ಲಿ ಎಂಬುದು ತಿಳಿದದ್ದು ಜೀವರಸಾಯನವಿಜ್ಞಾನದ ಬೆಳೆವಣಿಗಯಲ್ಲಿನ ಇನ್ನೊಂದು ಗುರುತುಗಲ್ಲು. ಜೋಸಫ್ ಪ್ರಿಸ್ಟ್ಲಿ, ಜಾನ್ ಇಂಗನ್‍ಹೌಸ್ ಇವರುಗಳ ಪರಿಶೋಧನೆಯ ಫಲವಿದು. ಜೀವದ ನಿಜ ಪರಿಚಯಹವಾದದ್ದು ಇನ್ನೊಂದು ಮುಖ್ಯ ಹೆಜ್ಜೆ. ಜೀವಕೋಶದಲ್ಲಿನ ರಸಾಯನ ಕಾರ್ಯಗಳು ವಿಶೇಷ ರೀತಿಯವು, ಅವು ಅಜೈವಿಕ ರಸಾಯನ ಕಾರ್ಯಗಳಂತಲ್ಲ, ಜೀವರಸಾಯನ ಕಾರ್ಯಗಳಿಗೆ ಮತ್ತು ಜೀವರಾಸಾಯನಿಕಗಳ ತಯಾರಿಕೆಗೆ ಜೀವದ ಆವಶ್ಯಕತೆಯುಂಟು ಎಂಬ ತಪ್ಪು ತಿಳುವಳಿಕೆ ಅದುವರೆಗೂ ಇತ್ತು. ವ್ಹೊಲರ್ ಎಂಬಾತ (1828) ಜೀವರಾಸಾಯನಿಕ ವಸ್ತುವಾದ ಯೂರಿಯವನ್ನು ಪ್ರಯೋಗ ಶಾಲೆಯಲ್ಲಿಯೇ ತಯಾರಿಸಿ, ಮೇಲೆ ಹೇಳಿದ ಪ್ರಾಣಬಲ ಸಿದ್ಧಾಂತ ಸರಿಯಲ್ಲ ಎಂದು ತೋರಿಸಿದ. ಎಪ್ಪತ್ತು ವರ್ಷಗಳ ಬಳಿಕ ಬುಕ್‍ನರ್ ಎಂಬಾತ ನಡೆಸಿದ ಪ್ರಯೋಗ ಈ ಶಾಸ್ತ್ರದ ಚರಿತ್ರೆಯಲ್ಲಿ ಮಹತ್ತ್ವಪೂರ್ಣವಾದದ್ದು. ಅವನು ಯೀಸ್ಟಿನ ಜೀವಾಣುಗಳನ್ನು ಮರಳಿನೊಂದಿಗೆ ಚೆನ್ನಾಗಿ ಅರೆದು ಜೀವಕೋಶಗಳ ಹೊರಮೈಯನ್ನು ಒಡೆದು ಅದರ ರಚನೆಯನ್ನು ನಾಶಮಾಡಿ ಅನಂತರ ಒತ್ತಡದ ಸಹಾಯದಿಂದ ಶೋಧಿಸಿ ದೊರೆತ ದ್ರವವನ್ನು ಪ್ರಯೋಗಕ್ಕೆ ಒಳಪಡಿಸಿದ. ಈ ಶೋಧಿತ ದ್ರಾವಣಕ್ಕೆ ಒಂದು ಜೀವಾಣುವಿಗೆ ಇರುವಂತೆ, ಸಕ್ಕರೆಯನ್ನು ಆಲ್ಕೊಹಾಲ್ ಆಗಿ ಪರಿವರ್ತಿಸಬಲ್ಲ ಸಾಮಥ್ರ್ಯ ಉಂಟು ಎಂದು ತೋರಿಸಿಕೊಟ್ಟ. ಅಂದರೆ ಈ ಸಾಮಥ್ರ್ಯ ಇರುವುದು ಜೀವಾಣುಗಳಲ್ಲಿನ ರಾಸಾಯನಿಕಗಳಲ್ಲಿ ಎಂದಾಯಿತು. ಆದ್ದರಿಂದ ಪರಿವರ್ತನ ಕ್ರಿಯೆಗೆ ಜೀವ ಬೇಕಾಗಿಲ್ಲ. ಪ್ರಾಣಬಲ ಸಿದ್ಧಾಂತದಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಯಿತು. ಬುಕ್‍ನರನ ಪ್ರಯೋಗ ಜೀವರಸಾಯನ ವಿಜ್ಞಾನವು ಜೀವರಸಾಯನಿಕಗಳನ್ನು ಕುರಿತ ಶಾಸ್ತ್ರ ಎಂಬುದನ್ನು ತೋರಿಸಿತು. ಹಾರ್ಡನ್ ಮತ್ತು ಯಂಗ್ ಎಂಬ ವಿಜ್ಞಾನಿಗಳು ಬುಕ್‍ನರನ ಪ್ರಯೋಗವನ್ನು ಮತ್ತುಷ್ಟು ವ್ಯಾಸಂಗಿಸಿ ಈ ಶಾಸ್ತ್ರದ ಒಂದು ಮುಖ್ಯ ಭಾಗವಾದ ಚಯಾಪಚಯ ಕ್ರಿಯೆಯ ಸಂಶೋಧನೆಯನ್ನು ಆರಂಭಿಸಿದರು. ಜೀವರಸಾಯನಿಕಗಳ ಅಧ್ಯಯನದಲ್ಲಿ ವಿಶೇಷವಾದ ಯಶಸ್ಸನ್ನು ಪಡೆದ ಎಮಿಲ್ ಫಿಷರ್ (1852-1919) ನಡೆಸಿದ ಸಂಶೋಧನೆಗಳು ಈ ವಿಜ್ಞಾನದ ಇನ್ನೊಂದು ಭಾಗವಾದ ಪದಾರ್ಥವಿಜ್ಞಾನಕ್ಕೆ ಅನುಕೂಲವಾಯಿತು. ಆತ ಜೀವಕೋಶಗಳಲ್ಲಿನ ರಾಸಾಯನಿಕಗಳನ್ನು ವಿಶೇಷವಾಗಿ ಅಭ್ಯಸಿಸಿ ಅವುಗಳಲ್ಲಿನ ಸಕ್ಕರೆಗಳು, ಅಮೈನೋ ಆಮ್ಲಗಳು ಮುಂತಾದವನ್ನು ಪ್ರಾಣಿ, ಸಸ್ಯಗಳ ಕೋಶಗಳಿಂದ ಬೇರ್ಪಡಿಸಿ ಶುದ್ಧಮಾಡಿದ. ಅನೇಕ ಜೀವರಾಸಾಯನಿಕಗಳನ್ನು ಪ್ರಯೋಗಮಾರ್ಗದಿಂದ ತಯಾರಿಸಿ ಅವುಗಳ ಅಣುರಚನೆಯನ್ನು ನಿಖರವಾಗಿ ಅನ್ವೇಷಿಸಿ ಜೀವರಸಾಯನವಿಜ್ಞಾನ ಬೆಳೆಯಲು ಅನುವುಮಾಡಿಕೊಟ್ಟ.

ಜೀವರಸಾಯನಕ್ರಿಯೆಗಳ ವೇಗೋತ್ಕರ್ಷಗಳಿಗೆ ಎನ್eóÉೈಮ್ ಅಥವಾ ಕಿಣ್ವಗಳೆಂದು ಹೆಸರು. ಈ ಹೆಸರನ್ನು ಬಳಕೆಗೆ ತಂದಾತ ಡಬ್ಲ್ಯು ಕೂಹ್ನ್ (1837-1900). ಈ ರೀತಿಯ ವೇಗೋತ್ಕರ್ಷಕಗಳು ಸಕ್ಕರೆಯನ್ನು ಮದ್ಯವನ್ನಾಗಿಸುವ ಯೀಸ್ಟಿನಲ್ಲಿ ಇವೆ ಎಂದು ಆತ ಪ್ರತಿಪಾದಿಸಿ ಅವನ್ನು ಯೀಸ್ಟ್‍ನಲ್ಲಿ ಅಥವಾ ಎನ್eóÉೈಮ್ ಎಂದೇ ಕರೆದ. ಈಗ ಅದೇ ಹೆಸರು ಉಳಿದ ಜೀವರಸಾಯನ ಕಾರ್ಯ ವೇಗೋತ್ಕರ್ಷಕಗಳೆಲ್ಲಕ್ಕೂ ಬಂದಿದೆ. ಕಿಣ್ವಗಳು ಹೆಚ್ಚಿನ ಉಷ್ಣತೆಯಲ್ಲಿ ನಾಶವಾಗುತ್ತವೆ. ಇವು ಕಾಯ್ ಎಸಗುವುದು ಒಂದು ಗೊತ್ತಾದ ಠಿಊ ಅಥವಾ ಆಮ್ಲತೆಯ ಮಟ್ಟದಲ್ಲಿ ಮಾತ್ರ ಎಂಬ ವಿವರಗಳು ಅನಂತರ ತಿಳಿದುಬಂದುವು. ಅಲ್ಲದೇ ಅವು ಪ್ರೋಟೀನುಗಳು ಎಂದು ಸಹ ಗೊತ್ತಾಗಿದೆ. ಸಮ್ನರ್ ಎಂಬಾತ ಯೂರಿಯವನ್ನು ಒಡೆಯುವ ಯೂರಿಯೇಸ್ ಎಂಬ ಕಿಣ್ವವನ್ನು ಹರಳಿನ ರೂಪದಲ್ಲಿ ತಯಾರಿಸಿ ಅದು ಪ್ರೋಟೀನು ಎಂಬುದನ್ನು 1926ರಲ್ಲಿ ಸ್ಪಷ್ಟಪಡಿಸಿದ. ಅಂದಿನಿಂದ ಎನ್eóÉೈಮಾಲಜಿ ಅಥವಾ ಕಿಣ್ವವಿಜ್ಞಾನ ಜೀವ ರಸಾಯನ ವಿಜ್ಞಾನದ ವಿಶೇಷ ಅಂಗವಾಗಿ ಬೆಳೆಯತೊಡಗಿತು.

ಮುಂದೆ ಶರೀರಕ್ರಿಯಾವಿಜ್ಞಾನದಿಂದ ಜೀವರಾಸಾಯನಿಕ ವಿಜ್ಞಾನದ ಬೆಳೆವಣಿಗೆಗೆ ಹೆಚ್ಚಿನ ಕುಮ್ಮಕ್ಕು ದೊರೆಯಿತು. ವಿಜ್ಞಾನದಲ್ಲಿ ಪ್ರಾಯೋಗಿಕ ವಿಧಾನವನ್ನು ಬಳಕೆಗೆ ತಂದ ಕ್ಲಾಡೆ ಬರ್ನಾರ್ಡ್ (1813-78) ಎಂಬಾತ ಸಸ್ಯಗಳಲ್ಲಿ ಪಿಷ್ಟ ಇರುವಂತೆಯೇ ಮಾಂಸಖಂಡಗಳಲ್ಲಿ ಗ್ಲೈಕೊಜನ್ ಇರುವುದೆಂದೂ ದೇಹದಲ್ಲಿ ಯಕೃತ್ತು ಈ ಕಾರ್ಬೊಹೈಡ್ರೇಟಿನ ಉಗ್ರಾಣವೆಂದೂ ತೋರಿಸಿಕೊಟ್ಟ. ಅದೇ ಕಾಲದಲ್ಲಿ ಷ್ವಾನ್ (1810-82) ಮತ್ತು ಕೂಹ್ನ್ ಅವರು ಪಚನಕ್ರಿಯೆಯನ್ನು ಅಭ್ಯಾಸ ಮಾಡುತ್ತಿದ್ದರು. ಇವುರ ಹಾಕಿದ ಹೆದ್ದಾರಿಯಿಂದ ದೇಹಕ್ರಿಯಾಶಾಸ್ತ್ರದ ಪರಿಶೋಧನೆಯಲ್ಲಿ ರಸಾಯನಮಾರ್ಗವೂ ಒಂದು ಎಂಬುದು ಗೊತ್ತಾಯಿತು. ಅವರ ಸಂಶೋಧನಾಲಯಗಳಲ್ಲಿ ರಸಾಯನವಿಜ್ಞಾನದ ಪ್ರಯೋಗಶಾಲೆಯೂ ಒಂದು ಅವಶ್ಯ ಭಾಗವಾಯಿತು. ಆಗಲೇ ಈ ಶಾಸ್ತ್ರಕ್ಕೆ ಶರೀರ ಕ್ರಿಯಾರಸಾಯನವಿಜ್ಞಾನ ಎಂಬ ಹೆಸರು ಬಂದದ್ದು. ವೈದ್ಯವಿಜ್ಞಾನದ ದೃಷ್ಟಿಯಿಂದ ಈ ಶಾಸ್ತ್ರ ಮೊದಮೊದಲು ಬೆಳೆಯಿತು. ಅನಂತರ ವಿಶ್ವವಿದ್ಯಾಲಯಗಳಲ್ಲಿ ಇದರ ಶಾಖೆಗಳು ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ 1872ರಲ್ಲೂ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ 1870ರಲ್ಲೂ ಪ್ರಾರಂಭವಾದವು. ಆಹಾರದಲ್ಲಿ ಇಟ್ಟು, ಕೊಬ್ಬ, ಪ್ರೋಟಿನ್ ಅಲ್ಲದೆ ಜೀವಸತ್ತ್ವಗಳು ಇರಬೇಕು ಎಂಬುದನ್ನು ಪ್ರತಿಪಾಧಿಸಿ ಆಹಾರವಿಜ್ಞಾನಕ್ಕೆ ತಳಹದಿ ಹಾಕಿದ ಗೌಲಾನ್ಡ್ ಹಾಪ್‍ಕಿನ್ಸ್ ಎಂಬಾತ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರೊಫೆಸರ್ ಆದುದು 1914ರಲ್ಲಿ. ಆತ ಜೀವರಸಾಯನ ಶಾಖೆಯ ಮುಖ್ಯಸ್ಧನಾಗಿ ಈ ಶಾಸ್ತ್ರಕ್ಕೆ ನಿಖರವಾದ ರೂಪಕೊಟ್ಟು ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದ ಬೋಧನೆಗೆ ಅನುವುಮಾಡಿಕೊಟ್ಟ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೀವರಸಾಯನ ವಿಜ್ಞಾನವಿಭಾಗ ಆರಂಭವಾದದ್ದು 1953ರಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1970ರಲ್ಲಿ. ಜೀವರಸಾಯನವಿಜ್ಞಾನದ ಸಂಶೋಧನಾ ಲೇಖನಗಳಿಗಾಗಿ ಮೀಸಲಾದ ಮೊದಲನೆಯ ಪತ್ರಿಕೆಯ ಹೆಸರು ಜಿûಟ್ ಷ್ಕ್ರಿಫ್ಟ್¥sóÀೂರ್ ಫಿಸಿಯಾಲಾಜಿಷೆಕೆಮಿ. ಇದು 1877ರಲ್ಲಿ ಪ್ರಾರಂಭವಾಯಿತು. ಅನಂತರ ಇಂಗ್ಲಿಷ್ ಭಾಷೆಯಲ್ಲಿ ಜರ್ನಲ್ ಆಫ್ ಬಯಲಾಜಿಕಲ್ ಕೆಮಿಸ್ಟ್ರಿ (1905) ಮತ್ತು ಬಯೊಕೆಮಿಕಲ್ ಜರ್ನಲ್ (1906) ಆರಂಭವಾದವು. ಅಂದಿನಿಂದ ಈ ಶಾಸ್ತ್ರದ ಲೇಖನಗಳಿಗಾಗಿಯೇ ಮೀಸಲಾಗಿರುವ ಸಂಶೋಧನಾ ಪತ್ರಿಕೆಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿವೆ. ಅಲ್ಲದೆ ಈ ಶಾಸ್ತ್ರದ ಲೇಖನಗಳು ಜೀವಸಂಬಂಧ ಶಾಸ್ತ್ರಗಳ ಎಲ್ಲ ಪತ್ರಿಕೆಗಳಲ್ಲಿಯೂ ಬರುತ್ತಿರುವುದರಿಂದ ಪ್ರಕಟವಾದ ಎಲ್ಲ ಲೇಖನಗಳನ್ನೂ ಒಬ್ಬ ಓದಿ ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯವಾದ ಮಾತಾಗಿದೆ.

3 ಬೆಳೆವಣಿಗೆ : 1940ರ ವರೆಗೂ ನಿಧಾನವಾಗಿ ಬೆಳೆಯುತ್ತಿದ್ದ ಜೀವರಸಾಯನ ವಿಜ್ಞಾನ. ಅನಂತರ ಅತಿವೇಗದಿಂದ ಹಾಗೂ ವ್ಯಾಪಕವಾಗಿ ಬೆಳೆದಿದೆ. ಇದಕ್ಕೆ ಕಾರಣ ಆಗ ನಡೆಯುತ್ತಿದ್ದ ಪರಮಾಣು ವಿದಳನ ಕಾರ್ಯಗಳ ಸಂಶೋಧನೆ ಮತ್ತು ಪರಮಾಣು ಬಾಂಬಿನ ತಯಾರಿಕೆಯ ಪ್ರಯೋಗಗಳಲ್ಲಿ ಬಿಡುಗಡೆ ಆದ ಇಂಗಾಲ, ರಂಜಕ, ಗಂಧಕ, ಕಬ್ಬಿಣ ಮುಂತಾದ ಪರಮಾಣುಗಳ ಸಮಸ್ಥಾನಿಗಳು (ಐಸೊಟೋಪ್ಸ್). ಇವುಗಳಿಗೆ ಎಲ್ಲ ವಿಧದಲ್ಲಿಯೂ ಸಾಮಾನ್ಯ ಪರಮಾಣುವಿನ ಗುಣಗಳೇ ಇದ್ದುದರ ಜೊತೆಗೆ ಇವು ವಿಕಿರಣಪಟು ಕೂಡ ಆಗಿದ್ದುವು. ಈ ಪರಮಾಣುಗಳಿಗೆ ಇದೊಂದು ಗುರುತುಚೀಟಿ ಹಚ್ಚಿದಂತೆ. ಇದರಿಂದಾಗಿ ಇವು ಅತ್ಯಲ್ಪ ಪ್ರಮಾಣದಲ್ಲಿ ಇದ್ದಾಗಲೂ ಆ ದ್ರಾವಣದಲ್ಲಿ ಉಳಿದ ವಸ್ತುಗಳು ಎಷ್ಟೇ ಇದ್ದರೂ ಅವನ್ನು ಒಳಗೊಂಡಿರುವ ರಾಸಾಯನಿಕಗಳ ಪ್ರಮಾಣ ಎಷ್ಟು ಇದೆ ಎಂಬುದನ್ನು ಶೋಧಿಸಬಹುದು. ಜೀವರಸಾಯನ ವಿಜ್ಞಾನದ ಬೆಳೆವಣಿಗೆಗೆ ಸಹಯಮಾಡಿದ ಒಂದು ವಿಶೇಷ ಉಪಕರಣ ಅತ್ಯಪಕೇಂದ್ರಕ (ಅಲ್ಟ್ರಾಸೆಂಟ್ರಿಫ್ಯೂಜ್). ಇದರ ನೆರವಿನಿಂದ ಕೋಶದಲ್ಲಿರುವ ದ್ರಾವಣದಲ್ಲಿನ ಘಟಕಗಳನ್ನು ಬೇರೆಬೇರೆ ಮಾಡಬಹುದು. ವಿದ್ಯುತ್ ಕ್ಷೇತ್ರದಲ್ಲಿ ರಾಸಾಯನಿಕಗಳು ಚಲಿಸುವ ವೇಗಭೇದವನ್ನು ಉಪಯೋಗಿಸಿಕೊಂಡು ರಾಸಾಯನಿಕಗಳನ್ನು ಬೇರ್ಪಡಿಸುವ ಮಾರ್ಗ ಇನ್ನೊಂದು. ಇದಕ್ಕೆ ವಿದ್ಯುತ್ ಕ್ಷೇತ್ರಚಲನೆ (ಎಲೆಕ್ಟ್ರೊಫಾರೆಸಿಸ್) ಎಂದು ಹೆಸರು. ಸೋಸು ಕಾಗದದ ಕ್ರೊಮಟಾಗ್ರಫಿ (ನೋಡಿ- ಕ್ರೋಮಟಾಗ್ರಫಿ) ಜೀವರಸಾಯನ ವಿಜ್ಞಾನದಲ್ಲಿ ವಿಫುಲವಾಗಿ ಬಳಸುತ್ತಿರುವ ಒಂದು ಸರಳ ತಂತ್ರ. ಇದನ್ನು ಅನುಸರಿಸಿ ಸಾಂಗರ್ ಎಂಬಾತ ಇನ್ಸುಲಿನ್ ಪ್ರೋಟೀನಿನಲ್ಲಿ ಅಮೈನೋ ಆಮ್ಲಗಳ ಅನುಕ್ರಮತೆಯನ್ನು ಶೋಧಿಸಿದ್ದಾನೆ. ಈತನ ಮಾರ್ಗವನ್ನು ಬಳಸಿಕೊಂಡು 12,100 ಅಣುತೂಕದ ರೈಬೋ ನ್ಯೂಕ್ಲಿಯೇಸ್ ಎಂಬ ಕಿಣ್ವದ ಅಣು ರಚನೆ ಅಲ್ಲದೆ ಹಲವಾರು ಬೃಹತ್ ಅಣುತೂಕದ ಪ್ರೋಟೀನುಗಳ ಅಣುರಚನೆಯನ್ನು ಶೋಧಿಸುವುದು ಕೂಡ ಸಾಧ್ಯವಾಗಿದೆ. ಈ ಹೊಸ ತಂತ್ರಗಳೂ ಅವುಗಳೊಂದಿಗೆ ವೈದ್ಯಶಾಸ್ತ್ರ, ಔಷಧಶಾಸ್ತ್ರ, ಮುಂತಾದ ಜೀವಸಂಬಂಧ ಶಾಸ್ತ್ರಗಳ ಪ್ರೋತ್ಸಾಹವೂ ಜೀವರಸಾಯನವಿಜ್ಞಾನದ ಬೆಳೆವಣಿಗೆಗೆ ಕಾರಣವಾಗಿವೆ. ಈ ಶಾಸ್ತ್ರದಲ್ಲಿನ ಸಂಶೋಧನೆ ಎಷ್ಟು ಬೆಲೆಯುಳ್ಳದ್ದು ಎಂಬುದನ್ನು ಕಳೆದ 30 ವರ್ಷಗಳಲ್ಲಿ ರಸಾಯನ ಮತ್ತು ವೈದ್ಯವಿಜ್ಞಾನಿಗಳಿಗೆ ಬಂದಿರುವ ನೊಬೆಲ್ ಪಾರಿತೋಷಿಕಗಳಲ್ಲಿ ಮುಕ್ಕಾಲುಪಾಲು ಜೀವರಸಾಯನವಿಜ್ಞಾನದ ಸಂಶೋಧನೆಗಳಿಗೇ ದೊರೆತಿರುವುದು ತೋರಿಸುತ್ತದೆ.

4 ಜೀವರಾಸಾಯನಿಕಗಳು : ಕೋಶದಲ್ಲಿನ ರಾಸಾಯನಿಕಗಳು, ಇವುಗಳ ತಯಾರಿಕೆಗೆ ಬೇಕಾದ ಆಹಾರಪದಾರ್ಥಗಳು, ರಸಾಯನಕ್ರಿಯೆಗಳನ್ನು ಆಗ ಮಾಡಿಸಲು ಬೇಕಾದ ಕ್ರಿಯಾವರ್ಧಕಗಳ, ಹಾರ್ಮೋನುಗಳು, ಸಿದ್ಧವಾದ ಮಹಾಣುಗಳು ಮತ್ತು ರಾಸಯನಿಕ ಬದಲಾವಣೆ ಹೊಂದಿ ವಿಸರ್ಜಿಸಲ್ಪಡಲು ಸಿದ್ಧವಾಗಿರುವ ಯೂರಿಯ ಮುಂತದವು. ಇವುಗಳಲ್ಲಿ ಅನೇಕ ವಸ್ತುಗಳ ಅಣುರಚನೆ ಬಲು ಜಟಿಲ, ಅವುಗಳ ತೂಕ ಲಕ್ಷಗಳ ಮಟ್ಟದಲ್ಲಿರಬಹುದು. ಈ ರೀತಿಯ ಮಹಾಣುಗಳು ಒಂದು ರೀತಿಯಾವಾದರೆ ಕಡಿಮೆ ಅಣುತೂಕದ ಆದರೂ ಜಟಿ ಅಣುರಚನೆಯುಳ್ಳ ರಾಸಯನಿಕಗಳು ಇವೆ. ಇವನ್ನು ಪ್ರಯೋಗಶಾಲೆಯಲ್ಲಿ ತಯಾರಿಸುವುದು ಸಾಧ್ಯ. ಆದರೆ ಬಲು ಕಷ್ಟ. ಇವುಗಳಲ್ಲಿ ಮುಖ್ಯವಾದವು ಕಾರ್ಬೊಹೈಡ್ರೇಟುಗಳು, ಪ್ರೋಟೀನು ಮತ್ತು ಅಮೈನೋ ಆಮ್ಲಗಳು, ಕೊಬ್ಬು ಎಣ್ಣೆಗಳ ಗುಂಪಿಗೆ ಸೇರಿದ ಲಿಪಿಡ್ಡುಗಳು ಹಾಗೂ ಜೀವಸತ್ತ್ವಗಳು. ಅಜೈವಿಕ ವಸ್ತುಗಳಾದ ಲವಣಗಳೂ ಜೀವಕೋಶದಲ್ಲಿದ್ದು ಅನೇಕ ಜೀವಕಾರ್ಯಗಳಲ್ಲಿ ಆವಶ್ಯಕ ಪಾತ್ರವನ್ನು ವಹಿಸುತ್ತವೆ.

5. ಕಾರ್ಬೊಹೈಡ್ರೇಟುಗಳು : ಸಸ್ಯ ಪಿಷ್ಠ ಅಥವಾ ಸ್ಪಾರ್ಚ್, ಮಾಂಸಖಂಡ ಮತ್ತು ಯಕೃತ್ತಿನಲ್ಲಿನ ಗ್ಲೈಕೊಜನ್ ಇವೆರಡು ಮಹಾಣುಗಳು. ಗ್ಲೂಕೋಸಿನ ಹಲವಾರು ಅಣುಗಳು ಒಂದಕ್ಕೊಂದು, ಒಂದು ನಿರ್ದಿಷ್ಟಕ್ರಮದಲ್ಲಿ ಸೇರಿಕೊಂಡು, ಆಗಿರುವ ವಸ್ತುಗಳಿವು. ಕಬ್ಬಿನ ಸಕ್ಕರೆಯಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳಿಂದಾಗಿರುವ ಸುಕ್ರೋಸ್, ಹಾಲಿನಲ್ಲಿ ಗ್ಲೂಕೋಸ್ ಮತ್ತು ಗೆಲಾಕ್ಟೋಸಿನಿಂದ ಆಗಿರುವ ಲ್ಯಾಕ್ಟೋಸ್, ಪಿಷ್ಟದಲ್ಲಿ ಮಾಲ್ಟೋಸ್ ಗ್ಲೂಕೋಸಿನ ಗುಂಪಿಗೆ ಸೇರಿದ ಮ್ಯಾನೋಸ್, ಇಂಗಾಲದ ಐದು ಪರಮಾಣುಗಳನ್ನು ಒಳಗೊಂಡು ನ್ಯೂಕ್ಲಿಯಿಕ್ ಆಮ್ಲಗಳಲ್ಲಿರುವ ರೈಬೋಸ್ ಮತ್ತು ಡೀಆಕ್ಸಿರೈಬೋಸ್ ಇವು ಜೀವರಾಸಯನಿಕಗಳು. ಮೇಲೆ ಹೇಳಿದ ಸುಲಭ ಸಕ್ಕರೆಗಳ ಜನ್ಯ ರಾಸಾಯನಿಕಗಳು ಸಹ ಕೋಶದ ಕ್ರಿಯೆಗಳಲ್ಲಿ ಆವಶ್ಯಕ ಪಾತ್ರವನ್ನು ವಹಿಸುತ್ತವೆ. ಗ್ಲೂಕೋಸಮೀನ್, ಓ-ಅಸಿಟೈಲ್ ಗ್ಲೂಕೋಸಮೀನ್, ಅಸಿಟೈಲ್ ಗೆಲಾಕ್ಟೋಸಮೀನುಗಳು ಮತ್ತು ಅವುಗಳ ಸಲ್ಫೇಟುಗಳು, ಗ್ಲೂಕುರೋನಿಕ್ ಆಮ್ಲ ಮತ್ತು ಗ್ಲೂಕೋನಿಕ್ ಆಮ್ಲಗಳು ಈ ಜನ್ಯವಸ್ತುಗಳು. ಇವೆಲ್ಲವೂ ಸ್ವಂತರೂಪದಲ್ಲಿಯೆ ಪಾತ್ರವಹಿಸುವಲ್ಲದೆ ಗ್ಲೂಕೋಸ್ ಮುಂತಾದವುಗಳೊಂದಿಗೆ ಸೇರಿ ಮಹಾಣುಗಳಾಗಿಯೂ ಇರುತ್ತವೆ. ಮ್ಯೂಕೊ ಪಾಲಿಸ್ಯಾಕರೈಡ್ ಈ ಜಾತಿಗೆ ಸೇರಿದುದು. ಇವು ಏಡಿಗಳ ಮೇಲಿರುವ ಚಿಪ್ಪುಗಳಲ್ಲಿ, ಕಾರ್ಟಿಲೇಜ್ ಅಥವಾ ಮೆಲ್ಲೆಲುಬಿನಲ್ಲಿ ಇರುತ್ತವೆ. ಮೂರು ನಾಲ್ಕು ಜನ್ಯವಸುಗಳನ್ನು ಒಳಗೊಂಡಿರುವ ಕಾಂಡ್ರಾಯ್ಟಿನ್ ಸಲ್ಫೇಟುಗಳೂ ರಕ್ತದ ಗುಂಪು ನಿರ್ಣಾಯಕ ವಸ್ತುಗಳೂ ಈ ಗುಂಪಿಗೆ ಸೇರಿದವು. ಈ ವಿಶೇಷ ಕಾರ್ಬೊಹೈಡ್ರೇಟುಗಳ ರಚನೆ ಮತ್ತು ವಿವರಗಳನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ. 			(ನೋಡಿ- ಕಾರ್ಬೋಹೈಡ್ರೇಟುಗಳು)

ಮ್ಯೂಕೊಪಾಲಿಸ್ಯಾಯಾಕರೈಡುಗಳು ಮತ್ತು ಅವುಗಳಲ್ಲಿನ ಅಣುಘಟಕಗಳು
ಪಾಲಿಸ್ಯಾಕರೈಡ್	ಪುನರಾವರ್ತಿಸುವ ಘಟಕಗಳಲ್ಲಿ 			ವಿವರ
		ಕಾರ್ಬೊಹೈಡ್ರೇಟುಗಳು
ಹಯಾಲ್ಯುರೋ	ಡಿ ಗ್ಲೂಕರೋನಿಕ್ ಆಮ್ಲ;			ಕಾಚದ್ರವ, ಹೊಕ್ಕಳುಬಳ್ಳಿ
ನಿಕ್ ಆಮ್ಲ	ಓ-ಅಸಿಟೈಲ್ ಗ್ಲೂಕೋ			ಕೋಶಗಳನ್ನು ಅಂಟಿಸುವ
		ಸಮೀನ್					ಸಿಮೆಂಟ್ ಮತ್ತು ಚರ್ಮಗಳಲ್ಲಿ

ಕಾನ್ಡ್ರಾಯ್ಟಿನ್	ಡಿ ಗ್ಲೂಕರೋನಿಕ್ ಆಮ್ಲ;			ಮೃದ್ವಸ್ತಿ; ಮೂಳೆಗಳಲ್ಲಿ
ಸಲ್ಫೇಟ್ ಎ	ಓ ಅಸಿಟೈಲ್ ಗೆಲಾಕ್ಟೊ ಸಮೀನ್
		ಸಲ್ಫೇಟ್

ಹೆಪರಿನ್		ಡಿ ಗ್ಲೂಕರೋನಿಕ್ ಸಲ್ಫೇಟ್;		ಜಿಗಣೆಯಲ್ಲಿ, ಮನುಷ್ಯನಲ್ಲಿ ಫುಪ್ಪುಸ
		ಡಿ ಗ್ಲೂಕೋಸಮೀನ್			ಶುದ್ಧರಕ್ತ ನಾಳದ ಗೋಡೆಗಳಲ್ಲಿ
		ಸಲ್ಫೇಟ್					ರಕ್ತ ಹೆಪ್ಪುಗಟ್ಟದಂತೆ ನಿರೋಧಿಸುತ್ತದೆ

ನ್ಯೂಮೋನಿಯಾ	ಡಿ ಗ್ಲೂಕೋಸ್; ಡಿ ಗ್ಲೂಕರೋನಿಕ್		ನ್ಯೂಮೋನಿಯಾ ರೋಗಾಣುಗಳಲ್ಲಿ
ರೋಗಾಣು	ಆಮ್ಲ
ಗಳಲ್ಲಿ ಪಾಲಿ
ಸ್ಯಾಕರೈಡ್

ಕೆರಟೊ ಸಲ್ಫೇಟ್	ಡಿ ಗೆಲಾಕ್ಟೊಸ್; ಓ-ಅಸಿಟೈಲ್ 		ಕಾರ್ಟಿಲೇಜ್ ಅಥವಾ ಮೃದ್ವಸ್ಥಿಯಲ್ಲಿ
		ಗ್ಲೂಕೋಸಮೀನ್ ಸಲ್ಫೇಟ್			ಕಣ್ಣು ಗುಡ್ಡೆಗಳಲ್ಲಿನ ಪಾರದರ್ಶಕ ಪಟಗಳಲ್ಲಿ

ಕೈಟಿನ್		ಓ-ಅಸಿಟೈಲ್ ಗ್ಲೂಕೋಸಮೀನ್		ಕಶೇರುಕಗಳ ಹೊರಮೈ

ಚಿತ್ರ-1

ಅಕ್ಕಿ, ಗೋಧಿ, ರಾಗಿ ಮತ್ತು ಬೇಳೆಯ ಕಾಳುಗಳಲ್ಲಿನ ಪಿಷ್ಟವೇ ಆಹಾರದಲ್ಲಿ ಮುಖ್ಯವಾಗಿರುವ ಕಾರ್ಬೊಹೈಡ್ರೇಟ್, ಆಹಾರವನ್ನು ತೆಗೆದುಕೊಂಡ ಬಳಿಕ ಜೊಲ್ಲುರಸದಲ್ಲಿನ ಅಮೈಲೇಸ್ ಮತ್ತು ಪ್ಯಾಂಕ್ರಿಯಾಸ್ ರಸದಲ್ಲಿನ ಅಮೈಲೇಸುಗಳು ಇದರ ಅಣುಗಳನ್ನು ಒಡೆದು ಮಾಲ್ಟೋಸ್ ಅಣುಗಳನ್ನಾಗಿ ಮಡುವುವು. ಕರುಳುರಸದಲ್ಲಿನ ಮಾಲ್ಟೇಸ್ ಎಂಬ ಕಿಣ್ವ ಮಾಲ್ಟೋಸ್ ಅಣುವನ್ನು ಒಡೆದು ಗ್ಲೂಕೋಸ್ ಅಣುಗಳಾಗಿ ಮಾಡುವುದು. ಹಾಲಿನ ಸಕ್ಕರೆಯಾದ ಲ್ಯಾಕ್ಟೋಸನ್ನು ಮತ್ತು ಸಕ್ಕರೆಯ ಸುಕ್ರೋಸನ್ನು ಒಡೆಯಲು ಲ್ಯಾಕ್ಟೇಸ್ ಮತ್ತು ಸುಕ್ರೇಸ್ ಎಂಬ ಕಿಣ್ವಗಳು ಬೇಕು. ಇವೆರಡೂ ಕರುಳುರಸದಲ್ಲಿ ಇವೆ. ನೀರಿನಲ್ಲಿ ಕರಗುವ ಸುಲಭ ಪದಾರ್ಥಗಳಾದ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಗೆಲಾಕ್ಟೋಸುಗಳು ಂಖಿP ಯ ಶಕ್ತಿಯನ್ನು ಉಪಯೋಗಿಸಿಕೊಂಡು ಕರುಳಿನ ಗೋಡೆ ದಾಟಿ ರಕ್ತವನ್ನು ಸೇರುತ್ತವೆ. ಅನಂತರ ಮಾಂಸಖಂಡಗಳ ಮತ್ತು ಯಕೃತ್ತಿನ ಕೋಶಗಳಿಗೆ ಹೋಗಿ ಅಲ್ಲಿ ಗ್ಲೂಕೋಸು ಗ್ಲೈಕೊಜನ್ ಆಗಿ ಸಂಗ್ರಹವಾಗುತ್ತದೆ. ಈ ರೀತಿಯ ಗ್ಲೈಕೊಜನ್ನಿನ ಸಂಶ್ಲೇಷಣೆಯ ಹಂತಗಳು ಹೀಗಿವೆ;

ಗ್ಲೂಕೋಸ್ (ಗ್ಲೂಕೋಸ್(6( ಫಾಸ್ಫೇಟ್(ಗ್ಲೂಕೋಸ್-1- ಫಾಸ್ಫೇಟ್
ಇದು UಖಿP ಯೊಂದಿಗೆ ಸೇರಿ UಆPಗ್ಲೂಕೋಸ್ ಆಗಿ ಅನಂತರ ಗ್ಲೈಕೊಜನ್ ಮಹಾಣು ತಯಾರುಗುತ್ತದೆ. ಈ ಕಾರ್ಯದಲ್ಲಿ UಆP ಯಲ್ಲಿನ ಗ್ಲೂಕೋಸ್ ಭಾಗ ಕೆಲವು ಗ್ಲೂಕೋಸ್ ಅಣುಗಳಿಂದ ಮೊದಲೇ ಸಿದ್ಧವಾಗಿದ್ದ ಪ್ರೈಮರಿಗೆ ವರ್ಗಾಯಿಸಲ್ಪಡುತ್ತದೆ; ಕ್ರಮಶಃ ಇದು ಬೆಳೆದು ಗ್ಲೈಕೊಜನ್ ಅಣುವಾಗುತ್ತದೆ ಮತ್ತು UಆP ಅಣು ಬಿಡುಗಡೆಯಾಗುತ್ತದೆ. ಗ್ಲೆಕೋಜನ್ನಿನ ವಿಶ್ಲೇಷಣೆಗೆ ಮೊದಲು ಅದು ಗ್ಲೂಕೋಸ್-1-ಫಾಸ್ಫೇಟ್ ಆಗಬೇಕು. ಈ ಕಾರ್ಯದ ಕ್ರಿಯಾವರ್ಧಕವಾಗಿ ಕೆಲಸ ಮಾಡುವ ಕಿಣ್ವದ ಹೆಸರು ಫಾಸ್ ಫಾರಿಲೇಸ್. ಇದು ಯಕೃತ್ತಿನಲ್ಲಿ ಮತ್ತು ಮಾಂಸಖಂಡಗಳಲ್ಲಿ ಜಡರೂಪದಲ್ಲಿದ್ದು ಅವು ಕಾರ್ಯಶೀಲವಾಗಲು ಚಕ್ರೀಯ ಂಒP ಎಂಬ ವಸ್ತು ಬೇಕು. ಈ ರಾಸಾಯನಿಕದ ತಯಾರಿಕೆಗೆ ಎಪಿನೆಫ್ರಿನ್ (ಮೂತ್ರಜನಕಾಂಗದ ಮೇಲಿರುವ ಗ್ರಂಥಿಯ ಹಾರ್ಮೋನ್) ಅಥವಾ ಗ್ಲೂಕಗಾನ್ (ಪ್ಯಾಂಕ್ರಿಯಾಸ್ ಗ್ರಂಥಿಯ ಹಾರ್ಮೋನ್) ಬೇಕು. ಗ್ಲೂಕೋಸ್-1- ಫಾಸ್ಫೇಟ್ ಈ ರೀತಿ ಗ್ಲೈಕೊಜನ್ನಿನಿಂದ ಬಂದು ನಿರ್ವಾಯು ಶರ್ಕರ ಪಥ ಮತ್ತು ಸಿಟ್ರಿಕ್ ಆಮ್ಲ ವರ್ತುಲ ಅಥವಾ ಪೆಂಟೋಸ್ ಫಾಸ್ಲೇಟ್ ಪಥ, ಅನಂತರ ಎಲೆಕ್ಟ್ರಾನ್ ಸಾಗಣೆ ಸರಣಿಯ ಮುಖಾಂತರ ಸಂಪೂರ್ಣ ಉತ್ಕರ್ಷಣ ಹೊಂದಿ ಶಕ್ತಿಯನ್ನು ಬಿಡುಗಡೆ ಮಾಡುವುದು. ಈ ಶಕ್ತಿ ಂಖಿP ರೂಪದಲ್ಲಿ ಸಂಗ್ರಹಿಸಲ್ಪಡುವುದು. (ನೋಡಿ- ಚಯಾಪಚಯ)

	ವ್ಯಕ್ತಿ ಹಸಿದಿರುವಾಗ ಆತನ 100 ಮಿಲಿಮೀಟರ್ ರಕ್ತದಲ್ಲಿ ಸುಮಾರು 80 ರಿಂದ 100 ಮಿಲಿಗ್ರಾಮಿನಷ್ಟು ಗ್ಲೂಕೋಸ್ ಇರುವುದು. ಆಹಾರ ತೆಗೆದುಕೊಂಡು ತರುವಾಯ ಅದು ಅರಗಿ ತಯಾರಾದ ಗ್ಲೂಕೋಸ್ ಕರುಳಿನ ಮೂಲಕ ರಕ್ತಕ್ಕೆ ಬರಲು ಆರಂಭಿಸಿದಾಗ ಅದರ ಮಟ್ಟ ರಕ್ತದಲ್ಲಿ ಸ್ವಲ್ಪ ಹೆಚ್ಚುತ್ತದೆ. ಆದರೆ ತೀರ ಹೆಚ್ಚಾಗುವುದಿಲ್ಲ. ಅದರ ಮಟ್ಟ 80 ಮಿಲಿಗ್ರಾಮಿಗಿಂತ ಹೆಚ್ಚಾದರೆ ಅದು ಮೂತ್ರದಲ್ಲಿ ಹೋಗುತ್ತದೆ. ಈ ರೀತಿ ಹೆಚ್ಚಾಗದಂತೆ ನೋಡಿಕೊಳ್ಳಲು ಪ್ಯಾಂಕ್ರಿಯಾಸಿನಿಂದ ಬಿಡುಗಡೆಯಾಗುವ ಇನ್ಸುಲಿನ್ ಎಂಬ ಹಾರ್ಮೋನ್ ಉಂಟು. ಕೋಶಗಳ ಪೊರೆಯನ್ನು ಹಾಯ್ದು ಗ್ಲೂಕೋಸ್ ಹೋಗುವುದನ್ನು ಈ ಹಾರ್ಮೋನ್ ಉತ್ತೇಜಿಸುತ್ತದೆ. ಮಿದುಳಿಗೆ ಗ್ಲೂಕೋಸ್ ಹೋಗಲು ರಕ್ತದಲ್ಲಿ ಅದು ಸಾಕಷ್ಟು ಇರಬೇಕು. ಕಡಿಮೆಯಾದರೆ ಅದು ಕೆಲಸ ಮಾಡಲಾರದು. ಅಲ್ಲದೆ ದೇಹಕ್ಕೆ ಒಮ್ಮೆಲೆ ಓಟಕ್ಕಾಗಿಯೋ ಮತ್ತಾವ ಕೆಲಸಗಳಿಗಾಗಿಯೋ ಶಕ್ತಿ ಬರಬೇಕಾದರೆ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಬೇಕಾಗುತ್ತದೆ. ಆಗ ಎಫಿನೆಫ್ರೀನ್ ಬಿಡುಗಡೆಯಾಗಿ ಯಕೃತ್ತಿನ ಗ್ಲೈಕೊಜನನ್ನು ಒಡೆದು ರಕ್ತದಲ್ಲಿ ಗ್ಲೂಕೋಸಿನ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಅಲ್ಲದೆ ಗ್ಲೂಕಗಾನ್ ಮತ್ತು ಕಾರ್ಟಿಕಲ್ ಹಾರ್ಮೋನುಗಳು, ಗುರಾಣಿಕ (ಥೈರಾಯಿಡ್) ಗ್ರಂಥಿಯ ಸ್ರಾವವಾದ ಥೈರಾಕ್ಸೀನ್, ಪಿಟ್ಯುಯಿಟರಿಯ ಬೆಳೆವಣಿಗೆಯ ಹಾರ್ಮೋನುಗಳಿಗೂ ರಕ್ತದಲ್ಲಿ ಗ್ಲೂಕೋಸಿನ ಮಟ್ಟವನ್ನು ಹೆಚ್ಚು ಮಾಡುವ ಕಾರ್ಯದಲ್ಲಿ ಪಾತ್ರವುಂಟು.

	ಹಾಲಿನ ಸಕ್ಕರೆಯಿಂದ ಬಂದ ಗೆಲಾಕ್ಟೋಸ್ ಮತ್ತು ಕಬ್ಬಿನ ಸಕ್ಕರೆಯಿಂದ ಬಂದ ಫ್ರಕ್ಟೋಸುಗಳನ್ನು ದೇಹ ಉಪಯೋಗಿಸಿಕೊಳ್ಳುವುದು. ಫ್ರಕ್ಟೋಸ್ ಆಗಬಲ್ಲುದು ಅಥವಾ ಅದು ಉತ್ಕರ್ಷಣ ಹೊಂದುತ್ತದೆ. ನಮ್ಮ ಆಹಾರದಿಂದ ಬರುವ ಗೆಲಾಕ್ಟೋಸ್ ಬಲು ಕಡಿಮೆಯಾದರೂ ಅದು ಗ್ಲೂಕೋಸ್ ಆಗಿ ಪರಿವರ್ತನ ಹೊಂದಿಯೇ ತೀರಬೇಕು. ಏಕೆಂದರೆ ಗೆಲಾಕ್ಟೋಸಿನ ಜನ್ಯವಸ್ತುವಾದ ಗೆಲಾಕ್ಟೊಸ್ ಫಾಸ್ಫೇಟು ವಿಷ. ಇದು ದೇಹದಲ್ಲಿ ಹೆಚ್ಚಾದರೆ ಬುದ್ಧಿಯ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ; ಅಲ್ಲದೆ ಕಣ್ಣಿನ ಪಾಪೆ ಪಾರದರ್ಶಕತೆಯನ್ನು ಕಳೆದುಕೊಂಡು ಕಣ್ಣು ಕುರುಡಾಗುವಂತೆ ಕೂಡ ಮಾಡುವುದು. ಗೆಲಾಕ್ಟೋಸಿನ ಚಯಾಪಚಯದ ಮೊದಲನೆಯ ಹೆಜ್ಜೆಯಲ್ಲಿ ಲ್ಯಾಕ್ಟೋಸ್ ಫಾಸ್ಫೇಟ್ ಆಗುವುದು. ಅನಂತರ ಇದು UಆP ಗ್ಲೂಕೋಸಿನೊಂದಿಗೆ (ಇದು UಖಿP ಮತ್ತು ಗ್ಲೂಕೋಸ್ ಫಾಸ್ಫೇಟುಗಳಿಂದ ಬರುತ್ತದೆ) ಫಾಸ್ಫೊಗೆಲಾಕ್ಟೋಸ್ ಯುರಿಡೈಲ್ ಟ್ರಾನ್ಸ್‍ಫರೇಸ್ ಕಿಣ್ವದ ಸಹಾಯದಿಂದ ಗ್ಲೂಕೋಸ್ ಫಾಸ್ಫೇಟ್ ಮತ್ತು UಆP ಗೆಲಾಕ್ಟೋಸ್ ಆಗುತ್ತದೆ. ಈ ಕೊನೆಯದನ್ನು UಆP ಗ್ಲೂಕೋಸನ್ನಾಗಿ ಮಾಡಲು ಮಾರ್ಗವಿದೆ. ಆವಶ್ಯಕ ಜೀನಿನ ಅಭಾವದಿಂದ ಈ ಟ್ರಾನ್ಸ್‍ಫರೇಸ್ ಕಿಣ್ವದ ತಯಾರಿಕೆ ಇಲ್ಲವಾದರೆ ಇದು ಸಾಧ್ಯವಿಲ್ಲ. ಅಂಥ ಶಿಶು ಗೆಲಾಕ್ಟೋಸನ್ನು ಮೂತ್ರದಲ್ಲಿ ಕಳೆದುಕೊಳ್ಳುವುದರೊಂದಿಗೆ ಬೆಳೆಯದ ಬುದ್ಧಿ ಮತ್ತು ಕುರುಡು ಬರುವ ರೋಗದಿಂದ ನರಳಬೇಕಾಗುತ್ತದೆ. ಹುಟ್ಟಿದ ಶಿಶುವಿನ ಮೂತ್ರವನ್ನು ಪರೀಕ್ಷಿಸಿ ಅದರಲ್ಲಿ ಕೆಲಾಕ್ಟೋಸ್ ಇದ್ದರೆ, ಅದಕ್ಕೆ ಹಾಲು ನಿಲ್ಲಿಸಿ, ಬೇರೆ ಆಹಾರ ಕೊಟ್ಟು, ಅದರ ಜೀವನಾಂಶವನ್ನು ತಪ್ಪಿಸಬಹುದು.

ಪ್ರೋಟೀನುಗಳು; ಜೀವದ ರಸಾಯನಮುಖವೇ ಪ್ರೋಟೀನ್, ಇದಿಲ್ಲದೆ ಜೀವವಿಲ್ಲ. ಎಲ್ಲ ಕೋಶಗಳಲ್ಲಿಯೂ ಪ್ರೋಟೀನಿನ ದ್ರಾವಣ ಉಂಟು. ಇದು ಕಲಿಲ ದ್ರಾವಣ. ಆದ್ದರಿಂದ ಇದಕ್ಕೆ ಅಭಿಸರಣ ಸಂಮರ್ದದ (ಆಸ್ಮಾಟಿಕ್ ಪ್ರೆಶ್ಯರ್) ಗುಣ ಇದೆ. ಕೋಶದಲ್ಲಿನ ದ್ರಾವಣದಲ್ಲಿ ಪ್ರೋಟೀನ್ ಹೆಚ್ಚಿಗೆ ಇರುವುದರಿಂದ ಕೋಶಾವೃತ್ತ ದ್ರವದಲ್ಲಿನ (ಇಂಟರ್‍ಸ್ಟೀಷಿಯಲ್ ಪ್ಲೂಯಿಡ್, ಅಂತರಾಕಾಶಿ ತರಲ) ನೀರು ಮತ್ತು ನೀರಿನಲ್ಲಿ ಕರಗಿರುವ ಆಹಾರಾಂಶಗಳು ಕೋಶವನನು ಹೋಗಲು ಸಾಧ್ಯವಾಗಿದೆ. ಹಾಗೆಯೇ ಈ ಸಂಮರ್ದದ ಕಾರಣವಾಗಿ ಹೆಚ್ಚು ನೀರು ಈ ದ್ರವದಿಂದ ರಕ್ಕಕ್ಕೆ ಬರುತ್ತದೆ. ಒಟ್ಟಿನಲ್ಲಿ ಜೀವಿಯಲ್ಲಿನ ಕೋಶ ಸಮುದಾಯ, ಅಂತರಾಕಾಶೀ ತರಲ ಮತ್ತು ನೀರಿನ ಹಂಚಿಕೆಗಳಲ್ಲಿ ಮತ್ತು ಆಹಾರಾಂಶಗಳ ಸಾಗಣೆಯಲ್ಲಿ ಪ್ರೋಟೀನು ತನ್ನ ಅಭಿಸರಣಸಂಮರ್ದದ ಕಾರಣ ಮುಖ್ಯಪಾತ್ರವಹಿಸುತ್ತದೆ. ಅದರ ತಯಾರಿಕೆ ಯಾವ ಕಾರಣದಿಂದಲಾದರೂ ಕಡಿಮೆಯಾದಾಗ ಅಂತರಾಕಾಶೀ ತರಲದಲ್ಲಿ ಹೆಚ್ಚು ನೀರು ನಿಂತು ಬಾವು ಕಾಣಿಸಿಕೊಳ್ಳುವುದು. ಧನ ಮತ್ತು ಋಣಧ್ರುವಗಲನ್ನು ತನ್ನ ಅಣುವಿನಲ್ಲಿ ಪಡೆದಿರುವುದು ಪ್ರೋಟೀನಿನ ಇನ್ನೊಂದು ವೈಶಿಷ್ಟ್ಯ. ಇದರಿಂದಾಗಿ ಪ್ರೋಟೀನು ರಕ್ತ ಮತ್ತು ಕೋಶದಲ್ಲಿನ ದ್ರಾವಣ ಮುಂತಾದವಲ್ಲಿ ಕಾಪುತಡೆಯಂತೆ (ಬಪ್ಫರ್) ವರ್ತಿಸುತ್ತದೆ; ಆದರೆ ಆಮ್ಲತೆ ವ್ಯತ್ಯಾಸವಾಗದಂತೆ ನೋಡಿಕೊಳ್ಳುವ ಸಾಮಥ್ರ್ಯ ಅದಕ್ಕೆ ಉಂಟು.

ಜೀವಕೋಶಗಳೆಲ್ಲವೂ ಪ್ರೋಟೀನುಗಳೇ. ಜೀವರಸಾಯನ ಕಾರ್ಯಗಳ ಕ್ರಿಯಾವರ್ಧಕಗಳಾದ ಕಿಣ್ವಗಳೂ ಪ್ರೋಟೀನುಗಳೇ. ಇವಲ್ಲದೆ ವಿಶೇಷ ಪ್ರೋಟೀನುಗಳೂ ಉಂಟು. ನ್ಯೂಕ್ಲಿಯೋ ಪ್ರೋಟೀನುಗಳು, ಜೀನಿಗಳು ಆಕ್ಸಿಜನ್ ಮತ್ತು ಇಂಗಾಲದ ಡೈಆಕ್ಸೈಡುಗಳನ್ನು ಸಾಗಿಸುವ ಕಾರ್ಯದ ಹೀಮೊಗ್ಲಾಬಿನ್, ಎಲೆಕ್ಟ್ರಾನ್ ಸಾಗಣೆಯಲ್ಲಿನ ಸೈಟೋಕ್ರೋಮುಗಳು, ಕೊಲೆಸ್ಟರಾಲನ್ನು ರಕ್ತದಲ್ಲಿ ಸಾಗಿಸಲು ಇರುವ ಲೈಪೊ ಪ್ರೋಟೀನುಗಳು, ಜೊಲ್ಲುರಸದ ಮ್ಯೂಕೋ ಫ್ರೋಟೀನು, ಕೂದಲು ಉಗುರಗಳಲ್ಲಿನ ಸ್ಕೆರೋ ಪ್ರೋಟೀನುಗಳು, ಕಾಳುಗಳಲ್ಲಿನ ಪ್ರೋಟೀನುಗಳು-ಇವೆಲ್ಲವಕ್ಕೂ ಜೀವಕಾರ್ಯಗಳಲ್ಲಿ ಆವಶ್ಯಕ ಪಾತ್ರ ಉಂಟು.

ದೇಹದ ಬೆಳೆವಣಿಗೆಗೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳಲ್ಲಿ ಪ್ರೋಟೀನುಗಳಿಗೆ ವಿಶೇಷ ಸ್ಥಾನವಿದೆ. ಅವುಗಳ ಪ್ರಮಾಣ ಮಾತ್ರ ಹೆಚ್ಚಾಗಿದ್ದರೆ ಸಾಲದು. ಒಂದೊಂದು ಪ್ರೋಟೀನಿಗೂ ಉತ್ತಮ ಗುಣ ಇರಬೇಕು. ಪ್ರೋಟೀನಿನ ಅಣುವಿನಲ್ಲಿರುವ ಆವಶ್ಯಕ ಅಮೈನೋ ಆಮ್ಲಗಳ ಪ್ರಮಾಣದಲ್ಲಿ ಈ ಗುಣ ಇರುವುದು. ಅಲನೀನ್, ಸೀರೀನ್, ಗ್ಲೂಟಾಮಿಕ್ ಅಸ್ಪಾರ್ಟಿಕ್ ಆಮ್ಲಗಳು ಮುಂತಾದ ಅಮೈನೋ ಆಮ್ಲಗಳನ್ನು ದೇಹದಲ್ಲಿನ ಕೋಶಗಳು ತಯಾರಿಸಬಲ್ಲವು. ಆದರೆ ಫಿನೈಲ್ ಅಲನೀನ್, ಟ್ರಿಪ್ಟೊಫೇನ್, ಮೆಥಿಯೋನಿನ್, ಐಸೊಲ್ಯೂಸೀನ್, ಲ್ಯೂಸೀನ್, ಥ್ರಿಯೋನಿನ್ ಮತ್ತು ವ್ಯಾಲಿನ್ ಎಂಬ ಎಂಟು ಅಮೈನೋ ಆಮ್ಲಗಳನ್ನು ತಯಾರಿಸಲು ಮನುಷ್ಯನ ಕೋಶದಲ್ಲಿ ಆಗುವುದಿಲ್ಲ. ಆದ್ದರಿಂದ ಇವು ಸಾಕಷ್ಟು ಪ್ರಮಾಣದಲ್ಲಿ ನಮ್ಮ ಆಹಾರದಿಂದಲೇ ಒದಗಬೇಕಾಗುತ್ತದೆ. ಈ ಆವಶ್ಯಕ ಅಮೈನೋ ಆಮ್ಲಗಳು ಟೈರೋಸೀನ್, ಸಿಸ್ಟೀನ್ ಮುಂತಾದ ಅಮೈನೋ ಆಮ್ಲಗಳ ತಯಾರಿಕೆಗೂ ಬೇಕು. ಪ್ರಾಣಿಜನ್ಯ ಪ್ರೋಟೀನುಗಳಾದ ಹಾಲಿನ ಕೇಸೀನ್, ಮೊಟ್ಟೆಯ ಅಲ್ಯುಮಿನ್ ಮತ್ತು ಗ್ಲಾಬ್ಯುಲಿನ್, ಸ್ನಾಯುವಿನ ಪ್ರೋಟೀನುಗಳು-ಇವುಗಳಲ್ಲಿ ಈ ಆವಶ್ಯಕ ಅಮೈನೋ ಆಮ್ಲಗಳು ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಇವನ್ನು ಉತ್ತಮ ಪ್ರೋಟೀನುಗಳೆಂದು ಪರಿಗಣಿಸಿದೆ. ಸಸ್ಯಜನ್ಯ ಪ್ರೊಟೀನುಗಳು ಈ ದೃಷ್ಟಿಯಲ್ಲಿ ಅಷ್ಟು ಉತ್ತಮವಲ್ಲ.

ಪ್ರೋಟೀನಿನ ಅಣು ಅನೇಕ ರೀತಿಯ ಅಮೈನೋ ಆಮ್ಲಗಳಿಂದ ಆದ ಸರಪಳಿ. ಒಂದನ್ನೊಂದು ಸೇರಿಸುವ ರಸಾಯನ ಕೊಂಡಿಗೆ ಪೆಪ್ಟೈಡ್ ಬಂಧವೆಂದು ಹೆಸರು. ಪ್ರೋಟೀನು ಅರಗಲು ಈ ಬಂಧಗಳನ್ನು ಮುರಿದು ಅಮೈನೋ ಆಮ್ಲಗಳ ತುಂಡುಗಳನ್ನಾಗಿ ಮಾಡಬೇಕು. ಪೆಪ್ಟೈಡು ಬಂಧಗಳನ್ನು ಮುರಿಯಲು ಕಿಣ್ವಗಳು ಬೇಕು. ಒಂದೇ ಕಿಣ್ವ ಎಲ್ಲ ಬಂಧಗಳನ್ನೂ ಮುರಿಯಲಾರದು. ಏಕೆಂದರೆ ವಿವಿಧ ಅಮೈನೋ ಆಮ್ಲಗಳನ್ನು ಸೇರಿಸಿದ ಕೊಂಡಿಗಳು ಒಂದೇ ರೀತಿಯವು ಅಲ್ಲ. ಕಿಣ್ವಗಳು ನಿರ್ದಿಷ್ಟ ಕೆಲಸವನ್ನು ಮಾತ್ರ ಮಾಡುವುದರಿಂದ ಈ ಕೆಲಸ ಮುಗಿಸಲು ಹಲವಾರು ಕಿಣ್ವಗಳೇ ಬೇಕು. ಜಠರಸದಲ್ಲಿರುವ ಕಿಣ್ವವಾದ ಪಿಪ್ಸಿನ್, ಪ್ರ್ಯಾಂಕ್ರಿಯಸ್ ರಸದಲ್ಲಿರುವ ಟ್ರಿಪ್ಸಿನ್, ಕಾರ್ಬಾಕ್ಸಿ ಪೆಪ್ಟಡೇಸ್ ಮತ್ತು ಕೈಮೋಟ್ರಿಪ್ಸಿನ್, ಕರಳುರಸದಲ್ಲಿರುವ ಅಮೈನೋ ಪೆಪ್ಟಿಡೇಸ್ ಮತ್ತು ಡೈ ಅಮೈನೋ ಪೆಪ್ಟಿಡೇಸ್ ಇವೆಲ್ಲವೂ ಆಹಾರದಿಂದ ಪ್ರೋಟೀನಿನ ಅಣುಗಳನ್ನು ಕ್ರಮವಾಗಿ ವಿಭಜಿಸಿ, ಅರಗಿಸಿ ಅಮೈನೋ ಆಮ್ಲಗಳನ್ನಾಗಿ ಮಾಡುತ್ತವೆ. ಪೆಪ್ಟಿನ್ ಕೆಲಸ ಮಾಡಲು ಬೇಕಾದ ಆಮ್ಲದ ಸ್ಥಿತಿಯನ್ನೂ ಜಠರದಲ್ಲಿನ ಹೈಡ್ರೋಕ್ಲೋರಿಕ್ ಆಮ್ಲ ಒದಗಿಸುತ್ತದೆ. ಅರ್ಧ ಅರಗಿದ ಪ್ರೋಟೀನು ಕರುಳನ್ನು ಹೊಕ್ಕಾಗ ಪ್ಯಾಂಕ್ರಿಯಾಸ್ ರಸದಲ್ಲಿ ಬೈಕಾರ್ಬೊನೇಟ್ ಈ ಆಮ್ಲತೆಯನ್ನು ಹೋಗಲಾಡಿಸಿ ಉಳಿದ ಕಿಣ್ವಗಳು ಕೆಲಸಮಾಡಲು ತಕ್ಕ ಸ್ಥಿತಿಯನ್ನು ಒದಗಿಸುತ್ತದೆ. ಇವೆಲ್ಲ ಕಿಣ್ವಗಳ ಕಾರ್ಯಫಲ ಅಮೈನೋ ಆಮ್ಲಗಳು. ಈ ರೂಪದಲ್ಲಿ ಕರುಳಿನ ಗೋಡೆ ಅವನ್ನು ಹೀರಿಕೊಂಡು ರಕ್ತಕ್ಕೆ ರವಾನಿಸುತ್ತದೆ. ಇಂಥ ಕಾರ್ಯಕ್ಕೆ ಶಕ್ತಿಬೇಕೆಂಬುದು ಗೊತ್ತಾಗಿದೆ. ಅಲ್ಲದೆ ಈ ಸಾಗಾಣಿಕೆಯಲ್ಲಿ ಪಿರಿಡಾಕ್ಸಿನ್ ಎಂಬ ಜೀವಸತ್ತ್ವ ಭಾಗವಹಿಸುತ್ತದೆ ಎಂದು ತಿಳಿದಿದೆ. ಇದರಲ್ಲೂ ಅಂತರಾಕಾಶೀ ತರಲದಿಂದ ಕೋಶಗಳಿಗೆ ಅಮೈನೋ ಆಮ್ಲಗಳನ್ನು ಸಾಗಿಸುವ ಕಾರ್ಯದಲ್ಲೂ ಕೆಲವು ಹಾರ್ಮೋನುಗಳು ಪಾತ್ರವಹಿಸುತ್ತವೆ. ಇದೇ ಪ್ರೋಟೀನಿನ ಚಯಾಪಚಯದಲ್ಲಿ ಈ ಹಾರ್ಮೋನುಗಳ ಮುಖ್ಯ ಕೆಲಸವಾಗಿರಲು ಸಾಧ್ಯ. ಮಾಂಸಖಂಡ ಮತ್ತು ವಪೆಯಲ್ಲಿ ಇನ್ಸುಲಿನ್, ಮಾಂಸಖಂಡ ಮತ್ತು ಮೂತ್ರಜನಕಾಂಗಗಳಲ್ಲಿ ಟೆಸ್ಟಸ್ಟಿರೋನ್, ಯಕೃತ್ತಿನಲ್ಲಿ ಇಪೆನೆಫ್ರಿನ್, ಮಾಂಸಖಂಡ ಮುಂತಾದವುಗಳಲ್ಲಿ Sಖಿಊ ಎಂಬ ಪಿಟ್ಯುಯಿಟರಿಯ ಹಾರ್ಮೋನುಗಳು ಈ ರೀತಿಯ ಸಾಗಾಣಿಕೆಯಲ್ಲಿ ಪಾತ್ರವಹಿಸುತ್ತವೆ ಎಂಬುದು ಕಂಡುಬಂದಿದೆ.

ಪ್ರೋಟೀನಿನ ಇನ್ನೊಂದು ವೈಶಿಷ್ಟ್ಯ ಅದು ದೇಹದಲ್ಲಿ ತೋರಿಸುವ ಗತೀಯ ಸಮತೋಲ (ಡೈನಮಿಕ್ ಈಕ್ವಿಲಿಬ್ರಿಯಮ್). ಈ ಸ್ಥಿತಿ ಏಕಕಾಲದಲ್ಲಿ ನಡೆಯುತ್ತಿರುವ ಪ್ರೋಟೀನಿನ ಸಂಶ್ಲೇಷಣೆ ಮತ್ತು ವಿಶ್ಲೇಷಣೆಗಳ ಫಲ. ಅಂದರೆ ಅಮೈನೋ ಆಮ್ಲಗಳ ಸಂಗ್ರಹದಿಂದ ಪ್ರೋಟೀನಿನ ಸಂಶ್ಲೇಷಣೆಗೆ ಅಮೈನೋ ಆಮ್ಲಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ಕಾಲದಲ್ಲಿ ಬೇರೆ ಬೇರೆ ಒಡೆಯುತ್ತಲೇ ಇರುವ ಪ್ರೋಟೀನುಗಳಿಂದ ಅಮೈನೋ ಆಮ್ಲಗಳು ಬಿಡುಗಡೆಯಾಗಿ ಅಮೈನೋ ಆಮ್ಲ ಸಂಗ್ರಹಕ್ಕೆ ಸೇರುತ್ತಿರುತ್ತವೆ. ಈ ಅಮೈನೋ ಆಮ್ಲಗಳ ಜನ್ಯ ವಸ್ತುಗಳಾದ ಎಪಿನೆಫ್ರಿನ್, ಥೈರಾಕ್ಸಿನ್ ಮುಂತಾದವುಗಳ ತಯಾರಿಕೆಗೆ ಬೇಕಾದ ಅಮೈನೋ ಆಮ್ಲಗಳ ಪೂರೈಕೆ ಈ ಸಂಗ್ರಹದಿಂದಲೇ. ಇದಕ್ಕೆ ಆಹಾರದಿಂದ ಒದಗಿದ ಅಮೈನೋ ಆಮ್ಲಗಳಲ್ಲದೆ ಕೋಶಗಳಲ್ಲಿ ತಯಾರಾದ ಅಮೈನೋ ಆಮ್ಲಗಳು ಕೂಡ ಬಂದು ಸೇರುತ್ತವೆ. ಕೋಶದಲ್ಲಿ ಅಮೈನೋ ಆಮ್ಲಗಳ ತಯಾರಿಕೆಗೂ ಬೇಕಾಗಿರುವುದು ಅಮೈನೋ ಗುಂಪನ್ನು ಕೊಡಲು ಸಿದ್ಧವಿರುವ ರಸಾಯನವಸ್ತು ಮತ್ತು ಈ ಆಮ್ಲದ ಕೀಟೋ ಆಮ್ಲ. ಇದು ಕೋಶದಲ್ಲಿ ತಯಾರಾಗುವುದು. ಬೇಕಾದುದಕ್ಕಿಂತ ಹೆಚ್ಚಾಗಿರುವ ಉಳಿದ ಅಮೈನೋ ಆಮ್ಲಗಳಿಂದಲೇ ಅಮೈನೋ ಗುಂಪು ಬರಬೇಕು. ಅಮೈನೋ ಆಮ್ಲವು ಅಮೈನೋ ಗುಂಪನ್ನು ಕೊಟ್ಟು ತಾನು ಕೀಟೋ ಆಮ್ಲ ಆಗುವುದು. 

ಚಿತ್ರ-2

	ಅನಂತರ ಅದು ಉತ್ಕರ್ಷಣ ಹೊಂದಿ ಇಂಗಾಲದ ಡೈ ಆಕ್ಸೈಡ್ ಆಗುವುದು. ಈ ರೀತಿ ಅಮೈನೋ ಗುಂಪಿನ ಸಾಗಣೆಯಿಂದ ಬೇಕಾದ ಅಮೈನೋ ಆಮ್ಲದ, ತಯಾರಿಕೆಯಲ್ಲದೆ, ಬೇಡದ ಅಮೈನೋ ಆಮ್ಲದ ರಸಾಯನ ಇತ್ಯರ್ಥವೂ ಆಗುವುದು. ಅಮೈನೋ ಗುಂಪಿನ ಸಾಗಣೆಯಲ್ಲಿ ಜೀವಸತ್ತ್ವದ ಪೆರಿಡಾಕ್ಸಾಲ್ ಫಾಸ್ಫೇಟ್ ಮತ್ತು ಪಿರಿಡಾಕ್ಸಮೀನುಗಳು ಆವಶ್ಯಕ ಪಾತ್ರ ವಹಿಸುವುವು.

ಮೆಥಿಯೋನೀನ್ ಅಮೈನೋ ಆಮ್ಲಕ್ಕೆ ವಿಶೇಷ ಜವಾಬ್ದಾರಿ ಉಂಟು. ಇದರ ಅಣು ಭಾಗವಾದ ಎಂಬುದಕ್ಕೆ ಕೋಶದಲ್ಲಿ ತಯಾರಾಗುವ ವ್ಯವಸ್ಥೆ ಇಲ್ಲದ್ದರಿಂದ ಇದು ಆಹಾರದ ಪ್ರೋಟೀನಿನಲ್ಲಿ ಇರಲೇಬೇಕಾದ ಆವಶ್ಯಕ ಅಮೈನೋ ಆಮ್ಲ. ಅಲ್ಲದೆ ಇದು ತನ್ನ ಮೀಥೈಲ್ ಗುಂಪನ್ನು (-ಅಊ3) ಮತ್ತು ತನ್ನಲ್ಲಿನ ಗಂಧಕದ ಪರಮಾಣುವನ್ನು ಉಳಿದ ಆವಶ್ಯಕ ವಸ್ತುಗಳ ತಯಾರಿಕೆಗಾಗಿ ದಾನಮಡಬಲ್ಲುದು. ಗಂಧಕಯುತ ಸಿಸ್ಟೀನ್ ತಯಾರಿಕೆ ಈ ರೀತಿ ಸಾಧ್ಯ. ಆಹಾರದಲ್ಲಿ ಅಮೈನೋ ಆಮ್ಲದ ಪೂರೈಕೆ ಕಡಿಮೆಯಾದರೆ ಆಗ ಮೀಥೈಲ್ ಗುಂಪಿನ ವಿತರಣೆಗೆ ಸಾಕಾದಷ್ಟು ಮೀಥೈಲ್ ಗುಂಪು ದೊರೆಯದೆ ಲಿಪಿಡ್ಡುಗಳಲ್ಲಿನ ಕೋಲೀನ್ ತಯಾರಾಗದೆ ಯಕೃತ್ತಿನ ಖಾಯಿಲೆಗಳು ಬರಬಹುದು.

ಚಿತ್ರ-3

ಕೆಲವು ಅಮೈನೋ ಆಮ್ಲಗಳು ಬೇಕಾದ ವಸ್ತುಗಳ ತಯಾರಿಕೆಗೆ ನೆರವಾಗಿ ಉಪಯೋಗಿಸಲ್ಪಡುವುವು. ಎಫಿನೆಫ್ರಿನ್, ನಾರ್‍ಎಪಿನೆಫ್ರಿನ್ ಮತ್ತು ಥೈರಾಕ್ಸಿನುಗಳಿಗೆ ಟೈರೊಸಿನ್ ಅಮೈನೋ ಆಮ್ಲ ಪ್ರಾರಂಭದ ವಸ್ತು. ಕೆಲವು ಅಮೈನೋ ಆಮ್ಲಗಳು ಆಮ್ಲದ ಗುಂಪನ್ನು ಕಳೆದುಕೊಂಡು ದೇಹದ ಉಪಯುಕ್ತ ವಸ್ತುಗಳಾಗುವುವು. ಈ ರೀತಿ ಆಗುವ ದೇಹಕ್ರಿಯಾ ಸಂಬಂಧವಾದ ವಸ್ತುಗಳ ಪಟ್ಟಿಯನ್ನು ಮತ್ತು ಅವುಗಳ ಪ್ರಾಮುಖ್ಯವನ್ನು ಮುಂದಿನ ಯಾದಿಯಲ್ಲಿ ತೋರಿಸಿದೆ. ಈ ಕಾರ್ಯದಲ್ಲಿಯೂ ಃ ಜೀವಸತ್ತ್ವದ ಪಿರಿಡಾಕ್ಸಾಲ್ ಫಾಸ್ಫೇಟ್ ಭಾಗವಹಿಸುತ್ತದೆ.

ಆಮ್ಲ ಗುಂಪನ್ನು ಕಳೆದುಕೊಂಡ ಅಮೈನೋ ಆಮ್ಲದ ಜನ್ಯವಸ್ತುಗಳು
ಅಮೈನೋ ಆಮ್ಲ			ಜನ್ಯವಸ್ತು 		ಪ್ರಾಮುಖ್ಯ

ಹಿಸ್ಟಿಡೀನ್ 		ಹಿಸ್ಟಮೀನ್		ರಕ್ತನಾಳಗಳನ್ನು ವಿಕಾಸಗೊಳಿಸುವ
						ಸಾಮಥ್ರ್ಯ ಉಂಟು

ಟ್ರಿಪ್ಟೊಫೇನ್		ಟ್ರಿಪ್ಟಮೀನ್		ಮಿದುಳಿನಲ್ಲಿರುವ ಸಿರೊಟೊನ್ನಿನ 	
						ತಯಾರಿಕೆಗೆ

ಡೋಪಾ 		ಡೋಪಾ ಅಮೀನ್		ಎಪಿನೆಫ್ರೀನ್ ಹಾರ್ಮೋನ್ ತಯಾರಿಕೆಗೆ

ಗ್ಲುಟಾಮಿಕ್ ಆಮ್ಲ		( ಅಮೈನೋ ಬ್ಯುಟರಿಕ್	ಮಿದುಳಿನಲ್ಲಿರುವ ರಸಾಯನ ವಸ್ತು
			ಆಮ್ಲ

ಅಸ್ಫಾರ್ಟಿಕ್ ಆಮ್ಲ		( ಆಲನೀನ್		ಜೀವಸತ್ತ್ವದ ಪ್ಯಾಂಟೋಥೆನಿಕ್
						ಆಮ್ಲದ ಅಣುಭಾಗ

ಲೈಸೀನ್			ಕೆಡವರೀನ್		ಕೊಳೆತ ಪ್ರಾಣಿಗಳಲ್ಲಿನ ವಿಷ

	

ಅಮೈನೋ ಗುಂಪನ್ನು ಗ್ಲೂಟಮೀನ್ ಎಂಬ ಗ್ಲುಟಾಮಿಕ್ ಆಮ್ಲದ ಜನ್ಯ ವಸ್ತುವಿನಲ್ಲಿ ಸಂಗ್ರಹಿಸಿಡಬಹುದು. ಇದು ಮೂತ್ರಜನಕಾಂಗದಲ್ಲಿ ಹೆಚ್ಚು ಇದ್ದು ಅಮೋನಿಯಮ್ ಅಯಾನುಗಳನ್ನು ಬೇಕಾದಾಗ ಬಿಡುಗಡೆ ಮಾಡುತ್ತದೆ. ಹೀಗೆ ಬಿಡುಗಡೆಯಾದ ಅಮೊನಿಯಮ್ ಅಯಾನು ಸೋಡಿಯಮ್ ಮತ್ತು ಪೊಟ್ಯಾಸಿಯಮ್ ದೇಹದಲ್ಲಿ ಉಳಿಯುವಂತೆ ಮಾಡುತ್ತದೆ. ಗ್ಲೂಟುಮಿನ್ನಿಗೆ ಈ ಕಾರ್ಯಭಾರವಲ್ಲದೆ ಗ್ಲೂಕೊಸ್, ಗೆಲಾಕ್ಟೋಸ್ ಮತ್ತು ಮ್ಯಾನೋಸುಗಳ ಅಮೈನೋಜನ್ಯವಸ್ತುಗಳನ್ನು ತಯಾರಿಸಲು ಅಮೈನೋ ಗುಂಪನ್ನು ಒದಗಿಸುವ ಜವಾಬ್ದಾರಿಯು ಉಂಟು. ಇಷ್ಟೆಲ್ಲ ಕಾರ್ಯಗಳಿಗು ಆಗಿ ಮಿಗುವ ಅಮೈನೋ ಗುಂಪು ಮನುಷ್ಯ ಮುಂತಾದ ಭೂಜೀವಿಗಳಲ್ಲಿ ಯೂರಿಯ ರೂಪದಲ್ಲಿಯೂ ಹಕ್ಕಿಗಳಲ್ಲಿ ಯೂರಿಕ್ ಆಮ್ಲದ ರೂಪದಲ್ಲಿಯೂ ಮೀನುಗಳಲ್ಲಿ ಅಮೊನಿಯ ರೂಪದಲ್ಲಿಯೂ ವಿಸರ್ಜಿಸಲ್ಪಡುವುವು. ಅಮೈನೋ ಗುಂಪು ತೆಗೆದ ಬಳಿಕ ಉಳಿವ ಕೀಟೋ ಆಮ್ಲ ಸಂಪೂರ್ಣವಾಗಿ ಉತ್ಕರ್ಷನ ಹೊಂದಿ ಇಂಗಾಲದ ಡೈಆಕ್ಸೈಡ್ ಆಗಿ ಶಕ್ತಿಯನ್ನು ಬಿಡುಗಡೆ ಮಾಡುವುದು. ಅಮೈನೋ ಆಮ್ಲಗಳ ಮುಖ್ಯ ಕೆಲಸ ಪ್ರೋಟೀನಿನ ಸಂಶ್ಲೇಷಣೆ. ಇವು ಮೊದಲು ಶಕ್ತಿಯುತವಾಗಿ ಅನಂತರ ತಮ್ಮ ತಮ್ಮ ಅಣುವಾಹಕ ಖಓಂ ಗಳೊಂದಿಗೆ ರೈಬೋಸೊಮಿಗೆ ಹೋಗಿ ಅಲ್ಲಿ ಸಂಕೇತವಾಹಕ ಖಓಂ ಗಳ ನೇತೃತ್ವದಲ್ಲಿ ಅನುಕ್ರಮವಾಗಿ ಸೇರಿ ಗೊತ್ತಾದ ಪ್ರೋಟೀನಿನ ಅಣುಗಳಾಗುವುವು.

	ಲಿಪಿಡ್ಡುಗಳು : ಕೊಬ್ಬು ಎಣ್ಣೆಗಳ ರಸಾಯನ ಗುಂಪಿಗೆ ಸೇರಿದ ರಸಾಯನ ವಸ್ತುಗಳು. ಇವು ನೀರಿನಲ್ಲಿ ಕರಗುವುದಿಲ್ಲ. ಕ್ಲೋರೊಫಾರಮ್, ಕಾರ್ಬನ್ ಟೆಟ್ರಕ್ಲೊರೈಡ್, ಈಥರ್ ಮುಂತಾದ ದ್ರಾವಕಗಳಲ್ಲಿ ಕರಗುತ್ತವೆ. ಇವುಗಳ ಅಣುಗಳು ಗ್ಲಿಸರಾಲ್ ಅಥವಾ ಸ್ಫಿಂಗೊಸೀನ್ ಎಂಬ ಆಲ್ಕೋಹಾಲ್ ಮತ್ತು ಫ್ಯಾಟಿ ಆಮ್ಲಗಳಿಂದ ಆದ ಎಸ್ಟರುಗಳ ಗುಂಪಿಗೆ ಸೇರಿದ ವಸ್ತುಗಳು. ಇವೆರಡು ರೀತಿಯ ವಸ್ತುಗಳಲ್ಲದೆ ಈ ಲಿಪಿಡ್ಡುಗಳಲ್ಲಿ ಫಾಸ್ಫಾರಿಕ್ ಆಮ್ಲ. ಕೋಲೀನ್, ಎಥನಾಲಮೀನ್ ಮತ್ತು ಸೀರೀನ್ ಎಂಬ ವಸ್ತುಗಳೂ ಇರಬಹುದು. ಮೊಟ್ಟೆ ಕೋಶದ ಕಣಗೋಡೆ ಮತ್ತು ರಕ್ತದಲ್ಲಿನ ಲೈಪೊಪ್ರೋಟೀನುಗಳು ಇವುಗಳಲ್ಲಿ ಈ ಗುಂಪಿಗೆ ಸೇರಿದ ಲೆಸಿತಿನ್, ಸೆಫಾಲಿನ್ ಮತ್ತು ಫಾಸ್ಫಟಿಡಯಲ್ ಸೀರೀನ್ ಎಂಬ ಫಾಸ್ಫೊ ಲಿಪಿಡ್ಡುಗಳಿವೆ. ಮಿದುಳು ಮತ್ತು ನರಗಳಲ್ಲಿ ಇದೇ ಗುಂಪಿಗೆ ಸೇರಿದ ಸ್ಫಿಂಗೋ ಮೈಲೀನ್, ಸೆರಿಬೊಸೈಡುಗಳು ಇವೆ. ಇವಲ್ಲದೆ ದೇಹದ ಅಂಟುಸ್ರಾವಗಳಲ್ಲಿನ ಮ್ಯಾಕೊಪ್ರೋಟೀನಿನ ಭಾಗವಾಗಿರುವ ಓ- ಅಸಿಟೈಲ್ ನ್ಯೂರಮೆನಿಕ್ ಆಮ್ಲ ಅಥವಾ ಸಿಯಾಲಿಕ್ ಆಮ್ಲವನ್ನು ಹೊಂದಿದ ಗ್ಲೈಕೊಲಿಪಿಡ್ಡುಗಳು ಇವೆ. ಈ ಲಿಪಿಡ್ಡುಗಳಲ್ಲಿರುವ ಸುಲಭವಸ್ತುಗಳ ಅಣು ರಚನೆಯನ್ನು ಮತ್ತು ಗ್ಲೈಕೊಲಿಪಿಡ್ಡುಗಳಲ್ಲಿನ ಅಣುಘಟಕಗಳನ್ನು ಮುಂದಿನ ಯಾದಿಗಳಲ್ಲಿ ತೋರಿಸಿದೆ.

ಚಿತ್ರ-ಉದಾಹರಣೆ

ಗ್ಲೆಕೊಲಿಪಿಡ್ಡುಗಳು ಮತ್ತು ಅವುಗಳಲ್ಲಿನ ಅಣುಘಟಕಗಳು

ಹೆಸರು		ಅಣುಘಟಕಗಳು			ವಿವರ

ಸೆರಮೈಡ್	ಸ್ಪಿಂಗೊಸೀನ್ ಮತ್ತು		-
		ವಿಶೇಷ
		ಫ್ಯಾಟಿ ಆಮ್ಲ *

ಸೆರಿಬ್ರೊಸೈಡ್	ಸೆರಮೈಡ್ ಮತ್ತು			ನರಗಳ ಹೊರಚೀಲ
		ಡಿ ಗೆಲಾಕ್ಟೋಸ್			ದಲ್ಲಿನ ವಸ್ತುಗಳು

		ಸೆರಮೈಡ್; ಡಿ ಗೆಲಾಕ್ಟೋಸ್
		ಮತ್ತು ಓ- ಅಸಿಟೈಲ್		ಗುಲ್ಮ ಮತ್ತು
ಗ್ಯಾಂಗ್ಲಿಯೊನೈಡ್	ಗೆಲಾಕ್ಟೋಸಮೀನ್	ಅಥವಾ		ನರಗಳಲ್ಲಿ
		ಅದೇ ರೀತಿಯ ವಸ್ತುಗಳು

ಸೆರಮೈಡ್ 	ಸೆರಮೈಡ್: ಡಿಗೆಲಾಕ್ಟೋಸ್		ಸೋಂಕು ರಕ್ಷಾ
ಅಲಿಗೊ		ಮತ್ತು ಗ್ಲೂಕೋಸ್			ಸಾಮಥ್ರ್ಯವಿರುವ
ಸ್ಯಾಕರೈಡ್					ವಸ್ತುಗಳು
ಗ್ಲೊಬೊಸೈಡ್	ಸೆರಮೈಡ್; ಗೆಲಾಕ್ಟೋಸ್		ಗುಲ್ಮ, ಕಲಿಜ, ಕೆಂಪು
		ಗ್ಲೂಕೋಸ್ ಮತ್ತು ಓ 		ರಕ್ತಕಣ ಮತ್ತು ಮಾನವ
		ಅಸಿಟೈಲ್ ಹೆಕ್ಸೊಸಮೀನ್		ರೇತಸ್ಸಿನಲ್ಲಿ

ಹೆಮಟೊಸೈಡ್	ಸರಮೈಡ್; ಗ್ಲೂಕೋಸ್,		ಕೆಂಪು ರಕ್ತಕಣದ
		ಗೆಲಾಕ್ಟೋಸ್ ಮತ್ತು		ಗೋಡೆ, ಮಿದುಳು
		ಸಿಯಾಲಿಕ್ ಆಮ್ಲ			ಮತ್ತು ಗುಲ್ಮಗಳಲ್ಲಿ

ಇವುಗಳಲ್ಲದೆ ಸ್ಟಿರಾಯ್ಡ್ ಗುಂಪಿಗೆ ಸೇರಿದ ಕೊಲೆಸ್ಟಿರಾಲ್, ಆ ಜೀವ ಸತ್ತ್ವಗಳು, ಲೈಂಗಿಕ ಮತ್ತು ಕಾರ್ಟಿಕಲ್ ಹಾರ್ಮೋನುಗಳು, ನೀರಿನ ಕ್ಷೇತ್ರಗಾಢತೆ- ಇವನ್ನು ತಗ್ಗಿಸಿ, ಎಣ್ಣೆ ಮತ್ತು ನೀರನ್ನು ನೊರೆಯಾಗಿಸಿ, ಎಣ್ಣೆ ಅರಗಿ ಕರುಳಿನ ಗೋಡೆಯ ಮೂಲಕ ಹೀರಿಕೊಳ್ಳಲು ಸಹಾಯ ಮಾಡುವ ಟಾರೋಕೋಲಿಕ್ ಆಮ್ಲ ಮತ್ತು ಗ್ಲೈಕೊಕೋಲಿಕ್ ಆಮ್ಲದ ಉಪ್ಪುಗಳನ್ನು ಕೂಡ ಲಿಪಿಡ್ಡುಗಳ ಗುಂಪಿಗೆ ಸೇರಿಸಬಹುದು. ನೀರಿನಲ್ಲಿ ಕರಗದ ಆದರೆ ಎಣ್ಣೆಯಲ್ಲಿ ಕರಗುವ ಂ ಮತ್ತು ಇ ಜೀವಸತ್ತ್ವಗಳು ಲಿಪಿಡ್ಡುಗಳೇ.	

ನಮ್ಮ ಆಹಾರದಲ್ಲಿರುವ ಮುಖ್ಯ ಲಿಪಿಡ್ಡುಗಳು ಎಣ್ಣೆ ಮತ್ತು ಕೊಬ್ಬು, ಉಳಿದ ಲಿಪಿಡ್ಡುಗಳಿಗೆ ಹೋಲಿಸಿ ನೋಡಿದರೆ ಇವುಗಳ ಅಣುರಚನೆ ಸುಲಭ. ಇವುಗಳಲ್ಲಿ ಗ್ಲಿಸರಾಲ್ ಮತ್ತು ಸ್ಟಿಯರಿಕ್, ಪಾಮೆಟಿಕ್, ಬ್ಯುಟರಿಕ್ ಆಮ್ಲಗಳೂ ಓಲಿಯಕ್ ಎಂಬ ಅತೃಪ್ತ ಇಂಗಾಲದ ಅಣುಯುಕ್ತ ಫ್ಯಾಟಿ ಆಮ್ಲವೂ ಇವೆ. ಮನುಷ್ಯನಲ್ಲಿ ಎಣ್ಣೆ ಅಥವಾ ಕೊಬ್ಬುಗಳು ಪೂರ್ಣವಾಗಿ ಅರಗುವುದಿಲ್ಲ. ಅವು ಜಠರದಿಂದ ಕರುಳನ್ನು ಹೊಕ್ಕ ತರುವಾಯ ಪಚನಕಾರ್ಯ ಆರಂಭವಾಗುತ್ತದೆ. ಇದಕ್ಕೆ ಬೇಕಾಗುವ ಕಿಣ್ವ ಪ್ಯಾಂಕ್ರಿಯಾಸ್ ರಸದಲ್ಲಿರುವುದು. ಇದಕ್ಕೆ ಲೈಪೇಸ್ ಎಂದು ಹೆಸರು. ಎಣ್ಣೆ ನೀರಿನಲ್ಲಿ ಕರಗದಿರುವುದರಿಂದ. ಈ ಕಿಣ್ವ ಎಣ್ಣೆಯ ಅಣುಗಳನ್ನು ತಲುಪಬೇಕಾದರೆ ಅದು ಎಣ್ಣೆನೀರುಗಳು ಸೇರಿ ನೊರೆನೊರೆಯಾದರೆ ಮಾತ್ರ ಸಾಧ್ಯ. ಈ ರೀತಿ ನೊರೆನೊರೆಯಾಗುವಂತೆ ಮಾಡಲು ಪಿತ್ತರಸದ ಉಪ್ಪುಗಳಿಗೆ ಸಾಮಥ್ರ್ಯ ಉಂಟು. ಇಂಥ ಸ್ಥಿತಿಯಲ್ಲಿ ಲೈಪೇಸ್ ಕಿಣ್ವ ಎಣ್ಣೆ ಅಥವಾ ಕೊಬ್ಬನ್ನು ಅಸಂಪೂರ್ಣವಾಗಿ ಅರಗಿಸುತ್ತದೆ. ಈ ರೂಪದಲ್ಲಿಯೇ ಕರುಳಿನ ಗೋಡೆಯ ಮೂಲಕ ಇದು ಹಾದು ಹೋಗಿ ದುಗ್ಧರಸವಾಗಿ, ಕಡೆಗೆ ತೊರಾಸಿಕ್ ನಾಳದ ಮೂಲಕ ರಕ್ತವನ್ನು ಸೇರುತ್ತದೆ. ಅನಂತರ ಯಕೃತ್ತಿಗೆ ಹೋಗಿ, ಆ ಜೀವಿಯ ನಿರ್ದಿಷ್ಟ ಕೊಬ್ಬಾಗಿ, ಮತ್ತೆ ರಕ್ತದ ಮುಖಾಂತರ ಹೋಗಿ ದೇಹದಲ್ಲಿ ಶೇಖರವಾಗುತ್ತದೆ. ಶಕ್ತಿಯ ಆವಶ್ಯಕತೆ ಇರುವಾಗ ಇವುಗಳ ಅಣುಗಳು ಒಡೆದು ಫ್ಯಾಟಿ ಆಮ್ಲವಾಗಿ ಅನಂತರ ಅದು ಬೀಟ ಉತ್ಕರ್ಷಣೆಗೆ ಒಳಪಡುತ್ತದೆ. ದೇಹದಲ್ಲಿ ಬೇಕದುದಕ್ಕಿಂತ ಹೆಚ್ಚು ಗ್ಲೂಕೋಸ್ ಇದ್ದರೆ ಅದೂ ಅಸಿಟೈಲ್ ಕೊಎನ್‍ಜೈಮ್ ಎ ಮೂಲಕ ಫ್ಯಾಟಿ ಆಮ್ಲವಾಗಿ ಅನಂತರ ಕೊಬ್ಬಾಗಿ ಪರಿವರ್ತಿತವಾಗುತ್ತದೆ.

ಒಂದು ಗ್ರಾಮ್ ಎಣ್ಣೆ ಅಥವಾ ಕೊಬ್ಬು 9 ಕಿಲೊಕ್ಯಾಲರಿಯಷ್ಟು ಶಕ್ತಿಯನ್ನೂ ಕಾರ್ಬೊಹೈಡ್ರೇಟು 4 ಕಿಲೊ ಕ್ಯಾಲರಿಯಷ್ಟು ಶಕ್ತಿಯನ್ನೂ ಕೊಡಬಲ್ಲವು; ಈ ದೃಷ್ಟಿಯಿಂದ ಮಾತ್ರವಲ್ಲ ಎಣ್ಣೆಯಲ್ಲಿ ಕರಗಿರುವ ಜೀವಸತ್ತ್ವಗಳಿಗಾಗಿ ಕೂಡ ಆಹಾರದಲ್ಲಿ ಎಣ್ಣೆ ಅಥವಾ ಕೊಬ್ಬು ಇರಬೇಕು. ಆದರೆ ದೇಹ ತನ್ನ ಶಕ್ತಿಗಾಗಿ ತನ್ನಲ್ಲಿರುವ ಕೊಬ್ಬನ್ನೇ ಸಂಪೂರ್ಣವಾಗಿ ನಂಬಿಕೊಂಡಿರಲಾಗದು. ಅಂಥ ಸಂದರ್ಭ ಬಂದರೆ (ಉಪವಾಸ ಮಾಡುತ್ತಿದ್ದಾಗ ಅಥವಾ ಗ್ಲೂಕೋಸಿನ ಉತ್ಕರ್ಷಣ ಏರುಪೇರಾಗಿರುವ ಮತ್ತು ಚಿಕಿತ್ಸಗೆ ಒಳಗಾಗದ ಸಿಹಿಮೂತ್ರ ರೋಗಿಗಳಲ್ಲಿ ಈ ಸಂದರ್ಭ ಸಾಧ್ಯ) ಆಗ ಫ್ಯಾಟಿ ಆಮ್ಲಗಳು ಸಂಪೂರ್ಣ ಉತ್ಕರ್ಷಣ ಹೊಂದದೆ ಅಸಿಟೊ ಅಸೆಟಿಕ್ ಆಮ್ಲ, ಬೀಟ ಹೈಡ್ರಾಕ್ಸಿಬ್ಯುಟಿರಿಕ್ ಆಮ್ಲ ಮತ್ತು ಅಸಿಟೋನ್ ಎಂಬ ವಸ್ತುಗಳು ರಕ್ತದಲ್ಲಿ ಹೆಚ್ಚಿ, ಅದರ ಆಮ್ಲತೆ ಯನ್ನು ಹೆಚ್ಚಿಸಿ ದೇಹವನ್ನು ತೊಂದರೆಗೆ ಈಡು ಮಾಡುತ್ತವೆ. ಆಮ್ಲತೆ ತೀರ ಹೆಚ್ಚಾದರೆ ಜ್ಞಾನ ತಪ್ಪಿಹೋಗಿ ಸಾಕಷ್ಟು ಬೇಗ ಚಿಕಿತ್ಸೆ ದೊರೆಯದೆ ಹೋದರೆ ಪ್ರಾಣಹಾನಿಯೂ ಆಗಬಹುದು. 

ಸ್ಪಿಂಗೊ ಮೈಲೀನ್, ಸೆರಿಬ್ರೊಸೈಡ್ ಮುಂತಾದ ವಿಶೇಷ ಲಿಪಿಡ್ಡುಗಳ ಚಯಾಪಚಯ ಕ್ರಿಯೆಯ ವಿವರಗಳು, ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಎಂಬ ವಿವರಗಳು ಅಷ್ಟು ಗೊತ್ತಿಲ್ಲ. ಹಾಗೆಂದರೆ ಅವು ಅಷ್ಟು ಮುಖ್ಯ ಎಂದಲ್ಲ. ಅವುಗಳ ಚಯಾಪಚಯ ಕ್ರಿಯೆಗಳ ಅಷ್ಟು ಜಟಿಲ ಎಂದು ಅರ್ಥ. ಅವು ಹೇಗೆ ಕೆಲಸ ಮಾಡುತ್ತವೆ ಎಂಬ ವಿಷಯ ಇತ್ತೀಚಿನ ಸಂಶೋಧನೆಯ ಉದ್ದೇಶವಾಗಿದೆ.

ಶರೀರ ಕ್ರಿಯೆಗಳಲ್ಲಿ ಭಾಗವಹಿಸುವ ಕೆಲವು ಹಾರ್ಮೋನುಗಳೂ ಪಿತ್ತರಸದ ಉಪ್ಪುಗಳೂ ಸ್ಟಿರಾಯ್ಡುಗಳು. ಈ ಗುಂಪಿಗೆ ಸೇರಿದ ಕೊಲೆಸ್ಟಿರಾಲ್ ಎಂಬುದು ಇನ್ನೊಂದು ರಸಾಯನವಸ್ತು. ಇದು ರಕ್ತದಲ್ಲಿ ಇದೆ. ಪಿತ್ತರಸದ ಉಪ್ಪುಗಳ ತಯಾರಿಕೆಗೆ ಬೇಕಾದ ಮತ್ತು ಅವುಗಳ ತಯಾರಿಕೆಯ ಹಂತಗಳಲ್ಲಿ ಮಧ್ಯವರ್ತಿ ರಸಾಯನ ವಸ್ತುವಿದು. ಆದರೆ ಸ್ಟಿರಾಯ್ಡ್ ಗುಂಪಿಗೆ ಸೇರಿದ ಲೈಂಗಿಕ ಹಾರ್ಮೋನುಗಳ ಮತ್ತು ಕಾರ್ಟಿಕಲ್ ಹಾರ್ಮೋನುಗಳ ತಯಾರಿಕೆಯಲ್ಲಿ ಇದೇ ರೀತಿ ಇದು ಪುರೋಗಾಮಿರಸಾಯನವಸ್ತುವೆಂದು ಹೇಳಲಾಗುವುದಿಲ್ಲ.
ಕೊಲೆಸ್ಟಿರಾಲಿನ ತಯಾರಿಕೆಗೆ ಆರಂಭದ ವಸ್ತು ಪೈರುವೇಟಿನಿಂದ ಬರುವ ಅಸಿಟೈಲ್ ಕೊ ಎನ್ ಜೈಮ್ ಎ ಇದು ಫ್ಯಾಟಿ ಆಮ್ಲ ಬೀಟ ಉತ್ಕರ್ಷಣೆ ಹೊಂದಿದಾಗಲೂ ಬರುತ್ತದೆ. ಕಾರಣಂತರದಿಂದ ಈ ಅಸಿಟೈಲ್ ಕೊ ಎನ್ ಜೈಮ್ ಎ ಯ ವೆಚ್ಚ ಕಡಿಮೆಯಾದರೆ ಇದರ ಮಟ್ಟ ಹೆಚ್ಚು ಹೆಚ್ಚು ಕೊಲೆಸ್ಟಿರಾಲ್ ತಯಾರಾಗುವುದು ಎಂದು ತೋರುತ್ತದೆ. ಗುರಾಣಿಕ ಗ್ರಂಥಿಯ ಸ್ರಾವವಾದ ಥೈರಾಕ್ಸೀನ್ ಕಡಿಮೆಯಾದಾಗ ಇದು ರಕ್ತದಲ್ಲಿ ಹೆಚ್ಚಾಗುತ್ತದೆ. ಇನ್ಸುಲಿನ್ ಕಡಿಮೆ ಆಗಿರುವ ಸಿಹಿಮೂತ್ರರೋಗಿಗಳ ರಕ್ತದಲ್ಲೂ ಇದು ಹೆಚ್ಚಾಗುವುದು. ಅಲ್ಲಿ ಇದು ಲೈಪೊ ಪ್ರೋಟೀನುಗಳ ಸಹಾಯದಿಂದ ಕರಗಿರುತ್ತದೆ. ಇದು ಮೂತ್ರದಲ್ಲಿ ಹೋಗುವುದಿಲ್ಲ. ಯಕೃತ್ತಿನಲ್ಲಿ ಸ್ವಲ್ಪಭಾಗ ಪಿತ್ತರಸದ ಉಪ್ಪುಗಳ ತಯಾರಿಕೆಗೆ ಬಳಕೆಯಾಗುತ್ತದೆ. ಅವುಗಳೊಂದಿಗೆ ಮಿಕ್ಕ ಅಂಶ ಪಿತ್ತರಸದಲ್ಲಿ ಪಿತ್ತಗ್ರಂಥಿಯ ಮುಖಾಂತರ ಕರುಳಿಗೆ ಹೋಗಿ, ಕರುಳಿನಲ್ಲಿ ರಸಾಯನ ಬದಲಾವಣೆ ಹೊಂದಿ ವಿಸರ್ಜಿತವಾಗುತ್ತದೆ. ಸ್ವಲ್ಪಮಟ್ಟಿಗೆ ಕರುಳಿನ ಗೋಡೆಯಿಂದ ಮತ್ತೆ ರಕ್ತಕ್ಕೆ ಬಂದು ಸೇರಿಕೊಳ್ಳಬಹುದು.

ಕೊಲೆಸ್ಟಿರಾಲ್ ನೀರಿನಲ್ಲಿ ಕರುಗುವುದಿಲ್ಲ. ಆದ್ದರಿಂದ ರಕ್ತದಲ್ಲಿ ಇದರ ಮಟ್ಟ ಹೆಚ್ಚಾದರೆ ಇದು ರಕ್ತನಾಳಗಳ ಒಳಗೋಡೆಯ ಮೇಲೆ ನಿಕ್ಷೇಪಗೊಂಡು ನಾಳಗಳ ಒಳನ್ಯಾಸ ಕಡಿಮೆಯಾಗಿ, ರಕ್ತ ಹರಿಯಲು ಹೆಚ್ಚು ಒತ್ತಡ ಅವಶ್ಯವಾಗಬಹುದು. ಬರಬರುತ್ತ ನಾಳದಲ್ಲಿ ರಕ್ತ ಹರಿಯದಂತೆ ಆಗಬಹುದು. ಇನ್ನು ಈ ನಾಲ ಗುಂಡಿಗೆಯ ಸ್ನಾಯುಗಳಿಗೆ ರಕ್ತವನ್ನು ಒದಗಿಸುವ ನಾಳವಾಗಿದ್ದರೆ ಹೃದಯಾಘಾತ ಕೂಡ ಆಗಬಹುದು. ಪಿತ್ತ ಗ್ರಂಥಿಯಲ್ಲಿ ಅಥವಾ ನಾಳದಲ್ಲಿ ಕಲ್ಲಿನ ರೀತಿ ಗಟ್ಟಿಯಾದ ಕೊಲೆಸ್ಟಿರಾಲ್ ಇರುವ ಶಿಲೆಗೆ ಪಿತ್ತಾಶ್ಮರಿ (ಕ್ಯಾಲ್ಕುಲಸ್) ಎಂದು ಹೆಸರು. ಈಗ ಪಿತ್ತಗ್ರಂಥಿಯಲ್ಲಿ ಪಿತ್ತ ನೀರನ್ನು ಕಳೆದುಕೊಂಡು ಗಟ್ಟಿ ದ್ರವವಾಗುವಾಗ ನೀರಿನಲ್ಲಿ ಕರಗದ ಕೊಲೆಸ್ಟಿರಾಲ್ ನಿಕ್ಷೇಪಗೊಂಡು ಈ ಪಿತ್ತಾಶ್ಮರಿ ಬೆಳೆಯುವ ಸಾಧ್ಯತೆ ಉಂಟು.

ಅಜೈವಿಕ ವಸ್ತುಗಳು : ಅಜೈವಿಕ ವಸ್ತುಗಳಲ್ಲಿ ಮುಖ್ಯವಾದವು ಕಬ್ಬಿಣ, ಕ್ಯಾಲ್ಸಿಯಮ್, ಅಯೊಡಿನ್, ಫಾಸ್ಪೇಟ್, ಕ್ಲೋರೈಡ್, ಸತು ಮುಂತಾದವು. ಜೀವರಸಾಯನ ವಸ್ತುಗಳು ಭಾಗವಾಗಿರುವುದು ಒಂದು ಗುಂಪು. ಕೋಶದಲ್ಲಿನ ರಕ್ತ ಮುಂತಾದ ದೇಹದ್ರವಗಳಲ್ಲಿರುವ ಸೋಡಿಯಮ್ ಪೊಟ್ಯಾಸಿಯಮ್ ಮತ್ತು ಕ್ಲೋರೈಡುಗಳು ಎರಡನೆಯ ಗುಂಪಿಗೆ ಸೇರಿದವು. ಸೋಡಿಯಮ್, ಪೊಟ್ಯಾಸಿಯಮ್ ಮುಂತಾದ ಉಪ್ಪುಗಳ ಪ್ರಾಮುಖ್ಯವನ್ನು ಮೊದಲು ವ್ಯಾಸಂಗ ಮಾಡಿದಾತ ಸಿಡ್ನಿ ರಿಂಗರ್. 1880 ರಲ್ಲಿ ಅವನು ಪ್ರಯೋಗಗಳನ್ನು ಮಾಡಿ ಕಪ್ಪೆಯ ಹೃದಯ ಸೋಡಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಮ್ ಇರುವ ದ್ರಾವಣದಲ್ಲಿ ಬದುಕಿ ಹೃದಯದ ಬಡಿತ ನಿಲ್ಲದೆ ಸಾಗುವುದು ಎಂಬುದನ್ನು ತೋರಿಸಿದ. ನಿಯತತಾಪೀರಕ್ತದ ಪ್ರಾಣಿಗಳಿಗೆ ಮೆಗ್ನೀಸಿಯಮ್ ಲವಣವೂ ಬೇಕು. ಈ ಲವಣಗಳ ಮುಖ್ಯ ಕೆಲಸಗಳಲ್ಲಿ ಮೊದಲನೆಯದು, ದೇಹದ ವಿವಿಧ ಭಾಗಗಳಲ್ಲಿ ನೀರಿನ ಹಂಚಿಕೆಯನ್ನು ಹತೋಟಿಯಲ್ಲಿಡುವ ಅಭಿಸರಣ ಸಂಮರ್ದವನ್ನು (ಆಸ್ಮಾಟಿಕ್ ಪ್ರೆಷರ್) ಸರಿಯಾಗಿ ಇಡುವುದು. ಹೀಗೆ ಮಾಡುವುದರಿಂದ ನೀರು, ಅದರಲ್ಲಿ ಕರಗಿದ ಆಹಾರರಾಂಶಗಳೊಂದಿಗೆ ರಕ್ತದಿಂದ ಕೋಶಗಳಿಗೆ ಮತ್ತು ವಿಸರ್ಜಿತ ವಸ್ತುಗಳು ಕೋಶದಿಂದ ರಕ್ತಕ್ಕೆ ಬರಲು ಸಾಧ್ಯವಾಗುತ್ತದೆ. ಸಾಧಾರಣವಾಗಿ ಕೋಶದಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ದುಗ್ಧರಸದಲ್ಲಿ ಕಡಿಮೆ. ಸಂದೇಶವಾಹಕ ನರಗಳಿಗೆ ಉತ್ತೇಜಕವಾಗಿ ಕೆಲಸ ಮಾಡುವುದು ಈ ಲವಣಗಳ ಇನ್ನೊಂದು ಕೆಲಸ. ರಕ್ತದಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಮ್ ಅಯಾನುಗಳ ಮಟ್ಟ ಸರಿಯಾಗಿಡುವ ಕಾರ್ಯದ ನಿರ್ವಹಣೆ ಮೂತ್ರಜನಕಾಂಗದ ಮೇಲಿನ ಗ್ರಂಥಿಯ ಕಾರ್ಟಿಕಲ್ ಹಾರ್ಮೋನುಗಳಿಂದ ಆಗುತ್ತದೆ.

ಕ್ಯಾಲ್ಸಿಯಮ್ ಮತ್ತು ಫಾಸ್ಫೇಟುಗಳೆರಡೂ ಮೂಳೆಯಲ್ಲಿ ವಿಶೇಷವಾಗಿ ಇರಬೇಕು. ಮೂಳೆ ಬೆಳೆಯಲು ಮತ್ತು ಆರೋಗ್ಯವಾಗಿರಲು ಅವು ಬೇಕು. ಕ್ಯಾಲ್ಸಿಯಮ್ ಲವಣಗಳು ತರಕಾರಿಗಳಲ್ಲಿನ ಫೈಟಿಕ್ ಆಮ್ಲಗಳೊಂದಿಗೆ ಸೇರಿಕೊಂಡು ಅವನ್ನು ಕರುಳು ಹೀರಿಕೊಳ್ಳದೆ ಹೋಗಬಹುದು. ಆದರೂ ರಾಗಿಯಲ್ಲಿನ ಕ್ಯಾಲ್ಸಿಯಮ್ಮನ್ನು ಕರುಳು ಹೀರಿಕೊಳ್ಳುತ್ತದೆ ಎಂದು ತೋರಿಸಲಾಗಿದೆ. ಹಾಗೆಯೇ ಹಾಲಿನ ಕ್ಯಾಲ್ಸಿಯಮ್ಮನ್ನು ಕೂಡ ಕರುಳು ಚೆನ್ನಾಗಿ ಹೀರಿಕೊಳ್ಳುತ್ತದೆ. ಈ ಕಾರ್ಯದಲ್ಲಿಯೂ ರಕ್ತದಲ್ಲಿ ಕ್ಯಾಲ್ಸಿಯಮನ್ನು ಸರಿಯಾದ ಮಟ್ಟದಲ್ಲಿ ಇಡುವ ಕಾರ್ಯದಲ್ಲಿಯೂ ಮೂಳೆಯನ್ನೂ ಸರಿಯಾಗಿ ಬೆಳೆಸುವುದರಲ್ಲಿರೂ ಆ ಜೀವಸತ್ತ್ವ ಬಲು ಮುಖ್ಯ ಪಾತ್ರವನ್ನು ವಹಿಸುವುದು. ಪ್ಯಾರಾಥೈರಾಯ್ಡ್ ಹಾರ್ಮೋನು ಮತ್ತು ಕ್ಯಾಲ್ಸಿಟೋನಿನುಗಳು ಕ್ಯಾಲ್ಸಿಯಮ್ ಚಯಾಪಚಯ ಕ್ರಿಯೆಯಲ್ಲಿ ಭಾಗವಹಿಸುವ ಹಾರ್ಮೋನುಗಳು, ಕ್ಯಾಲ್ಸಿಯಮ್ ಅಯಾನು ರಕ್ತ ಹೆಪ್ಪುಗಟ್ಟಲೂ ಅಲ್ಲದೆ ಕೋಶದ ಹೊರಪೊರೆಯ ಆರೋಗ್ಯಕ್ಕೂ ನರಗಳ ದೂತಕ್ರಿಯೆಗೂ ಬೇಕು.

ಕಬ್ಬಿಣ ರಕ್ತಗತವಾಗಲು ಅದು ಫೆರಸ್ ರೂಪದಲ್ಲಿ ಮತ್ತು ಹೆಚ್ಚು ಆಮ್ಲತೆಯ ಸ್ಥಿತಿಯಲ್ಲಿ ಇರಬೇಕು. ಹೀರಿಕೊಳ್ಳುವ ಪ್ರಮಾಣ ಕರುಳಿನ ಗೋಡೆಯಲ್ಲಿನ ಫೆರ್ರಿಟಿನ್ನಿನ ಮಟ್ಟವನ್ನು ಅವಲಂಬಿಸಿದೆ. ಈ ಫೆರ್ರಿಟಿನ್ ದ್ವಾರಪಾಲಕನಾಗಿ ಕೆಲಸ ಮಾಡುತ್ತದೆ; ಮತ್ತು ದೇಹಕ್ಕೆ ಅವಶ್ಯವಿರುವಷ್ಟು ಮಾತ್ರ ಕಬ್ಬಿಣವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಏಕೆಂದರೆ ಒಂದು ಸಲ ದೇಹಕ್ಕೆ ಸೇರಿದ ಕಬ್ಬಿಣ. ದೇಹದಿಂದ ಆಚೆಗೆ ಹೋಗುವುದು ರಕ್ತದ ರೂಪದಲ್ಲಿ ಮಾತ್ರ. ಹೆಚ್ಚಾದ ಕಬ್ಬಿಣ ದೇಹದಲ್ಲಿಯೇ ಉಳಿದು ಯಕೃತ್ತಿನ ಜೀವಕೋಶಗಳಿಗೆ ಘಾಸಿ ಮಾಡಬಹುದು. ಫೆರ್ರಿಟನ್ ಕೂಡ ಫೆರಿಕ್ ರೂಪದ ಕಬ್ಬಿಣವನ್ನು ಹೊಂದಿದ ಪ್ರೋಟೀನು. ಇದರ ರೂಪದಲ್ಲಿಯೇ ಕಬ್ಬಿಣ ಗುಲ್ಮದಲ್ಲಿ ಮತ್ತು ಮೂಳೆಯ ಮಜ್ಜೆಯಲ್ಲಿ ಸಂಗ್ರಹವಾಗುತ್ತದೆ. ರಕ್ತದಲ್ಲಿ ಕಬ್ಬಿಣವನ್ನು ಸಾಗಿಸಲು ಟ್ರಾನ್ಸ್ ಫೆರಿನ್ ಎಂಬ ಇನ್ನೊಂದು ಪ್ರೋಟಿನ್ ಉಂಟು. ದೇಹದ ಉತ್ಕರ್ಷಣ ಕ್ರಿಯೆಯಲ್ಲಿ ಕಬ್ಬಿಣ ಮುಖ್ಯ ಪಾತ್ರವನ್ನು ವಹಿಸುತ್ತದೆ. ಉತ್ಕರ್ಷಣ ಕ್ರಿಯೆಗೆ ಬೇಕಾದ ಆಕ್ಸಿಜನ್ನಿನ ಸಾಗಣೆಗಾಗಿ ಇರುವ ಹೀಮೊಗ್ಲೋಬಿನ್ನಿನಲ್ಲಿ ಮತ್ತು ಸ್ನಾಯುಗಳಲ್ಲಿ ಇರುವ ಮಯೋಗ್ಲೋಬಿನ್ನುಗಳಲ್ಲಿ ಕಬ್ಬಿಣ ಫೆರಸ್ ರೂಪದಲ್ಲಿದೆ. ಹೀಮೊಗ್ಲೋಬಿನ್ ಆಕ್ಸಿಜನ್ನನ್ನು ತೆಗೆದುಕೊಂಡಾಗ ಈ ಫೆರಸ್ ರೂಪದಲ್ಲಿ ಬದಲಾವಣೆ ಆಗುವುದಿಲ್ಲ. ಕೋಶಗಳಲ್ಲಿರುವ ಸೈಟೊಕ್ರೋಮುಗಳಲ್ಲಿ ಫೆರಸ್ ಮತ್ತು ಫೆರಿಕ್ ರೂಪಗಳೆರಡಲ್ಲಿಯೂ ಕಬ್ಬಿಣ ಇರುತ್ತದೆ. ಸೈಟೋಕ್ರೋಮಿನಲ್ಲಿನ ಫೆರಸ್ ರೂಪ ಒಂದು ಎಲೆಕ್ಟ್ರಾನನ್ನು ಕೊಟ್ಟು ಉತ್ಕರ್ಷಣ ಹೊಂದಿ ಫರಿಕ್ ರೂಪ ತಾಳಬಲ್ಲದು. ಮತ್ತೆ ಈ ಫೆರಿಕ್ ರೂಪ ಎಲೆಕ್ಟ್ರಾನನ್ನು ತೆಗೆದುಕೊಂಡು ಆಕರ್ಷಣಗೊಂಡು ಫೆರಸ್ ರೂಪ ಪಡೆಯಬಲ್ಲುದು. ಈ ಗುಣದಿಂದ ಸೈಟೊಕ್ರೋಮುಗಳು ಎಲೆಕ್ಟ್ರಾನು ಸಾಗಣೆ ಕಾರ್ಯದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ.

ಪಾರ್ ಫೈರಿನುಗಳು : ಹಿಮೊಗ್ಲೋಬಿನ್, ಸೈಟೊಕ್ರೋಮ್ ಮುಂತಾದ ಕಬ್ಬಿಣಯುಕ್ತ ರಸಾಯನ ವಸ್ತುಗಳ ಅಣುಗಳಲ್ಲಿ ಪಾರ್ ಫೈರಿನುಗಳು ಅವಶ್ಯಭಾಗ. ಇವು ಜಟಿಲ ಅಣುರಚನೆ ಇರುವ ರಸಾಯನ ವಸ್ತುಗಳು. ಗ್ಲೈಸೀನ್ ಅಮೈನೋ ಆಮ್ಲ ಮತ್ತು ಸಕ್ಸಿನಿಕ್ ಆಮ್ಲಗಳು ಇವುಗಳ ತಯಾರಿಕೆಗೆ ಪ್ರಾರಂಭದ ವಸ್ತುಗಳು. ಇವು ಪಿರಿಡಾಕ್ಸಾಲ್ ಫಾಸ್ಫೇಟಿನ ಸಹಾಯದಿಂದ ಪಾರ್ಫೊಬಿಲಿನೊಜನ್ ಎಂಬ ಪಿರೋಲ್ ರಸಾಯನ ಗುಂಪಿಗೆ ಸೇರಿದ ವಸ್ತುವಾಗುವುವು. ಈ ಪಾರ್ಫೊ ಬಿಲಿನೊಜನ್ನಿನ ನಾಲ್ಕು ಅಣುಗಳು ಸೇರಿಕೊಂಡು ಕೆಲವಾರು ಬದಲಾವಣೆ ಹೊಂದಿ ಪಾರ್‍ಫೈರಿನ್ ಆಗುವುದು.

ಪಾರ್ ಫೈರಿನುಗಳ ಅಪಚಯ ಕ್ರಿಯೆಯಲ್ಲಿ ಇವು ಬಿಲಿವರ್ಡಿನ್ ಮತ್ತು ಬಿಲಿರುಬಿನ್ ಎಂಬ ಹಸಿರು ಮಿಶ್ರಿತ ಹಳದಿ ಬಣ್ಣದ ವಸ್ತುಗಳಾಗುವುವು. ಬಳಿಕ ಯಕೃತ್ತಿನಲ್ಲಿ ಗ್ಲೂಕುರೋನಿಕ್ ಆಮ್ಲದೊಂದಿಗೆ ರಾಸಾಯನಿಕ ಪರಿವರ್ತನೆಗೊಂಡು ಗ್ಲೂಕುರೊನೈಡುಗಳಾಗುತ್ತವೆ. ಮುಂದೆ ಪಿತ್ತರಸದ ಭಾಗವಾಗಿ ಕರುಳಿಗೆ ಹೋಗುವುವು. ಕರುಳಿನಲ್ಲಿ ರಸ ಬದಲಾವಣೆಗೊಂಡು ಕೆಲಮಟ್ಟಿಗೆ ಮಲದಲ್ಲಿ ವಿಸರ್ಜಿತವಾಗುತ್ತವೆ. ಸ್ವಲ್ಪಭಾಗ ಮತ್ತೆ ರಕ್ತಕ್ಕೆ ಬಂದು ಮತ್ತು ಯಕೃತ್ತಿಗೆ ಹೋಗುವುದು. ಕೆಲವೊಮ್ಮೆ ಪಿತ್ತರಸ ನಾಳದಲ್ಲಿ ಅಡ್ಡ ಉಂಟಾದಾಗ ಅಥವಾ ಯಕೃತ್ತಿಗೆ ಖಾಯಿಲೆಯಾಗಿ ಕೆಲಸ ಮಾಡಲಾಗದಿದ್ದಾಗ ಅಥವಾ ರಕ್ತಕಣನಾಶ ಹೆಚ್ಚಾದಾಗ ಈ ಬಣ್ಣದ ವಸ್ತುಗಳು ರಕ್ತದಲ್ಲಿ ಹೆಚ್ಚಿ ಕಾಮಲೆರೋಗ ಬರುತ್ತದೆ.

5 ಕಿಣ್ವ ವಿಜ್ಞಾನ : ಕಿಣ್ವಗಳು ರಸಾಯನ ಕಾರ್ಯಗಳ ವೇಗವನ್ನು ಹೆಚ್ಚಿಸುವ ಪ್ರೋಟೀನುಗಳು; ಅಷ್ಟೇ ಅಲ್ಲ ರಸಾಯನ ಕಾರ್ಯಗಳು ಆಗಬೇಕಾದರೆ ಇವು ಇದ್ದೇ ಇರಬೇಕು. ಇವುಗಳ ಸಾಮಥ್ರ್ಯ ಅಣುವಿನ್ಯಾಸವನ್ನು ಅವಲಂಬಿಸಿದೆ. ಅಧಿಕ ಉಷ್ಣತೆ ಕಿಣ್ವದ ಅಣುವಿನ್ಯಾಸವನ್ನು ಬದಲಾಯಿಸಬಹುದು. ಆದ್ದರಿಂದ ಇವುಗಳ ಕಾರ್ಯಕ್ಕೆ ಉಷ್ಣತೆ ಹಾಳತವಾಗಿರಬೇಕು ಆಮ್ಲತೆ ಅಣುವಿನ್ಯಾಸವನ್ನು ವ್ಯತ್ಯಾಸ ಮಾಡಬಹುದಾದ್ದರಿಂದ ಒಂದು ಗೊತ್ತಾದ ಆಮ್ಲತೆಯ ಮಟ್ಟ ಈ ಕಿಣ್ವಗಳ ಕೆಲಸಕ್ಕೆ ಅತ್ಯಾವಶ್ಯಕ. ಇವೆರಡನ್ನೂ ಒದಗಿಸಿದರೆ ಕಿಣ್ವಗಳು ತಮ್ಮ ಕೆಲಸ ಮಾಡಿ ಮುಗಿಸುತ್ತವೆ. ಇವುಗಳ ಇನ್ನೊಂದು ವಿಶೇಷ ಗುಣವೆಂದರೆ ಇವು ತೋರಿಸುವ ನಿರ್ದಿಷ್ಟತೆ. ಅಂದರೆ ಕಿಣ್ವ ಕೆಲಸಮಾಡಲು ರಾಸಾಯನಿಕವಾಗಿ ಪರಿವರ್ತನೆಗೊಳ್ಳುವ ವಸ್ತು ನಿರ್ದಿಷ್ಟವಾಗಿರಬೇಕು. ಅದರ ಅಣುವಿನಲ್ಲಿ ಸ್ವಲ್ಪ ಬದಲಾವಣೆಯಾದರೂ ಈ ಕಿಣ್ವ ಕೆಲಸ ಮಾಡಲಾರದು. ಅಷ್ಟೇ ಅಲ್ಲದೆ ಅಣುರಚನೆಯಲ್ಲಿ ಸ್ವಲ್ಪ ಬದಲಾವಣೆ ಹೊಂದಿರುವ ವಸ್ತುಗಳೂ ಕಿಣ್ವಕ್ಕೆ ವಿಷವಾಗಲು ಸಾಧ್ಯ. ವಿಷಕ್ರಿಮಿಗಳನ್ನು ಕೊಲ್ಲಲು ಈ ಗುಣ ಉಪಯೋಗಿಸಿಕೊಳ್ಳಬಹುದು. ಕೀವು ತರವು ಬ್ಯಾಕ್ಟೀರಿಯಗಳನ್ನು ಸಲ್ಫನಿಲಮೈಡ್ ಕೊಲ್ಲುವುದು ಈ ಕಾರಣದಿಂದಲೇ. ಈ ಬ್ಯಾಕ್ಟೀರಿಯಗಳು ಬೆಳೆಯಲು, ಪ್ಯಾರಾ ಅಮೈನೊ ಬೆನ್‍ಜೊಯಿಕ್ ಆಮ್ಲ ಅಥವಾ ಪಾಬಾ ಎಂಬ ವಸ್ತುವನ್ನು ಒಂದು ಕಿಣ್ವದ ಸಹಾಯದಿಂದ ತಮಗೆ ಆವಶ್ಯಕವಾದ ವಸ್ತುವನ್ನಾಗಿ ಬದಲಾಯಿಸಿಕೊಳ್ಳಬೇಕು. ಸಲ್ಫನಿಲಮೈಡಿನ ಅನುರಚನೆ ಪಾಬಾದಂತೆಯೇ ಇರುವುದರಿಂದ ಈ ಕಿಣ್ವ ಅದನ್ನು ಹಿಡಿದುಕೊಂಡು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದರಿಂದ, ಅದನ್ನು ನಂಬಿದ ಬ್ಯಾಕ್ಟೀರಿಯಗಳ ಬೆಳೆವಣಿಗೆ ನಿಂತು, ಅವು ನಾಶವಾಗುವುವು. ಔಷಧಗಳ ತಯಾರಿಕೆಯಲ್ಲಿ-ಅಂದರೆ ವಿಷಕ್ರಿಮಿಗಳು ಏಡಿಗಂತಿ ಕೋಶಗಳು ಮುಂತಾದವುಗಳಲ್ಲಿ ಅತ್ಯವಶ್ಯವಾದ ರಸಾಯನ ಮತ್ತು ಬದಲಾವಣೆಯ ಕಾರ್ಯವನ್ನು ಕಂಡುಹಿಡಿದು, ರಸಾಯನವಸ್ತುವಿನ ಅಣುಸಾದೃಶ್ಯವಿರುವ ಔಷಧ ತಯಾರಿಸುವ ಮಾರ್ಗ-ಬಲು ಸಫಲವಾಗಿದೆ. ಆದರೆ ಈ ಔಷಧಿ ದೇಹದ ಉಳಿದ ಕೋಶಗಳಿಗೆ ಮಾರಕವಾಗದಂತೆ ಇರಬೇಕು.

ಚಿತ್ರ-4

ಎಲ್ಲ ಜೀವಕಾರ್ಯಗಳೂ ರಸಾಯನಕಾರ್ಯಗಳ ಒಕ್ಕೂಟವೇ ಆದ್ದರಿಂದಲೂ ಎಲ್ಲ ರಸಾಯನಕಾರ್ಯಗಳೂ ಕಿಣ್ವವನ್ನೇ ಅವಲಂಬಿಸಿರುವುದರಿಂದಲೂ ಕೋಶದಲ್ಲಿ ಸಂದರ್ಭೋಜಿತವಾಗಿ ಅವುಗಳ ಮಟ್ಟವನ್ನು ಹೆಚ್ಚು ಕಡಿಮೆ ಮಾಡಬೇಕಾಗುತ್ತದೆ. ಇದಕ್ಕೆ ಮಾರ್ಗಗಳುಂಟು. ಕಿಣ್ವಗಳ ತಯಾರಿಕೆಯನ್ನು ಪ್ರಚೋದಿಸುವುದು ಒಂದು ಮಾರ್ಗ. ಗ್ಲೂಕೋಸನ್ನು ಆಹಾರವಾಗಿ ಕೊಟ್ಟು ಬೆಳೆಸಿದ ಯೀಸ್ಟ್ ಕೋಶಗಳು ಗೆಲಾಕ್ಟೋಸನ್ನು ಒಡೆದು ಆಲ್ಕೊಹಾಲ್ ತಯಾರಿಸುವ ಸಾಮಾಥ್ರ್ಯವನ್ನು ಪಡೆದಿರುವುದಿಲ್ಲ. ಅಂದರೆ ಅದರಲ್ಲಿ ಈ ಗೆಲಾಕ್ಟೊಸನ್ನು ಉಪಯೋಗಿಸಿಕೊಳ್ಳಲು ಬೇಕಾದ ಕಿಣ್ವವಿಲ್ಲ ಎಂದಾಯಿತು. ಆದರೆ ಅದನ್ನೆ ಗೆಲಾಕ್ಟೋಸ್ ದ್ರಾವಣದಲ್ಲಿ ಸ್ವಲ್ಪಕಾಲ ಇಟ್ಟರೆ ನಿಧಾನವಾಗಿ ಅದನ್ನು ಬಳಸಿಕೊಳ್ಳುವ ಸಾಮಥ್ರ್ಯ ಬರುತ್ತದೆ. ಇದೇ ರೀತಿ ಪಿಷ್ಟದಿಂದ ಅಮೈಲೇಸ್ ಕಿಣ್ವ ಟ್ರಿಪ್ಟೊಫೇನ್ ಅಮೈನೋ ಆಮ್ಲದಿಂದ ಟ್ರಿಪ್ಟೊಫಿನೇಸ್ ಕಿಣ್ವ ಮುಂತಾದವನ್ನು ಕೆಲವು ಏಕಾಣುಜೀವಿಗಳಲ್ಲಿ ತಯಾರಾಗುವಂತೆ ಪ್ರಚೋದಿಸಬಹುದು. ಕಿಣ್ವಗಳ ತಯಾರಿಕೆಯನ್ನು ತಗ್ಗಿಸುವುದು ಇನ್ನೊಂದು ಮಾರ್ಗ. ಇದಕ್ಕೆ ಉತ್ತಮ ಉದಾಹರಣೆ ಆರ್ಜಿನೀನ್ ತಯಾರಿಕೆಯಲ್ಲಿ ಪಾಲುಗೊಳ್ಳುವ ಆರ್ನಿಥೀನ್ ಟ್ರಾನ್ಸ್ ಕಾರ್ಬಮೈಲೇಸ್ ಎಂಬ ಕಿಣ್ವ. ಈಕೊಲೈ ಕೋಶಗಳನ್ನು ಸಹಜ ಸ್ಥಿತಿಯಲ್ಲಿ ಬಳಸಿದರೆ ಇದರ ಮಟ್ಟ ಸಾಕಷ್ಟು ಇರುತ್ತದೆ. ಆರ್ಜಿನೀನ್ ಹೆಚ್ಚಿರುವ ಆಹಾರ ದ್ರಾವಣದಲ್ಲಿ ಬೆಳೆಸಿದರೆ ಈ ಕಿಣ್ವದ ಮಟ್ಟ ಕಡಿಮೆ ಆಗುತ್ತದೆ.

ಮೇಲಿನ ಎರಡು ರೀತಿಯ ಪ್ರಯೋಗಗಳಲ್ಲಿಯೂ ಆಯಾ ಕಿಣ್ವಗಳ ತಯಾರಿಕೆಗೆ ಆ ಜೀವಿಗಳಲ್ಲಿ ಬೇಕಾದ ಜೀನುಗಳು ಇದ್ದೇ ಇರಬೇಕು. ಹೀಗಿದ್ದರೂ ಅವುಗಳ ತಯಾರಿಕೆಗೆ ಹೇಗೆ ಹೆಚ್ಚು ಕಡಿಮೆಯಾಗುತ್ತದೆ ಎಂಬುದನ್ನು ಜಾಕೊಬ್ ಮತ್ತು ಮೊನೊಡ್ ಎಂಬ ಜೀವರಸಾಯನ ವಿಜ್ಞಾನಿಗಳು ವಿವರಣೆ ಕೊಟ್ಟಿದ್ದಾರೆ. ಅವರ ಪ್ರಕಾರ ಜೀನಿನಲ್ಲಿ ಎರಡು ಭಾಗ. ಮೊದಲನೆಯದು ಅಪೆರಾನ್. ಇದರಲ್ಲಿ ಅನುಕ್ರಮ ಸಂಕೇತ ಭಾಗ ಮತ್ತು ನಿರ್ವಾಹಕ ಭಾಗ ಎರಡೂ ಸೇರಿದೆ. ಜೀನಿನ ಇನ್ನೊಂದು ಭಾಗದಲ್ಲಿ ಪ್ರೋಟೀನಿನ ತಯಾರಿಕೆಯ ವೇಗದ ನಿಯಂತ್ರಣಕ್ಕೆ ಏರ್ಪಾಡು ಉಂಟು. ಈ ಭಾಗದ ನಿದೇಶನದಂತೆ ಅಪೊರಿಪ್ರೆಸರ್ ಎಂಬ ಪ್ರೋಟೀನು ತಯಾರಾಗಿ ಅದು ಕಿಣ್ವ ತಯಾರಿಸುವ ವಸ್ತುವಿನೊಂದಿಗೆ (ಮೇಲಿನ ಉದಾಹರಣೆಯಲ್ಲಿ ಆರ್ಜಿನೀನಿನೊಂದಿಗೆ) ಸೇರಿಕೊಂಡು ಆದ ವಸ್ತು ನಿರ್ವಾಹಕ ಭಾಗ ಕೆಲಸ ಮಾಡದಿರುವಂತೆ ನಿರೋಧಿಸುತ್ತದೆ. ಆರ್ಜಿನೀನ್ ಕಡಿಮೆಯಾಗಿದ್ದರೆ ನಿರೋಧವಸ್ತುವಿನ ಪ್ರಮಾಣ ಕಡಿಮೆಯಾಗಿ ನಿರ್ವಾಹಕ ಭಾಗ ಕಿಣ್ವ ತಯಾರಿಕೆಯ ಕಾರ್ಯದ ಉತ್ತೇಜವನ್ನು ಮುಂದುವರಿಸುತ್ತದೆ. ಈ ಮಾರ್ಗದಲ್ಲಿ ತಯಾರಿಸಿದ ವಸ್ತುವೇ ತಯಾರಿಕೆಯ ಕಿಣ್ವವನ್ನು ಹತೋಟಿಯಲ್ಲಿ ಇಟ್ಟಂತಾಯಿತು. ಇದೇ ರೀತಿಯಲ್ಲಿ ಪ್ರಚೋದನಾ ಮಾರ್ಗವನ್ನೂ ವಿವರಿಸಬಹುದು. ಇಲ್ಲಿ ರಾಸಾಯನಿಕ ಪರಿವರ್ತನೆಗೊಳ್ಳಬೇಕಾದ ವಸ್ತು (ಉದಾಹರಣೆಯಲ್ಲಿ ಗೆಲಾಕ್ಟೋಸ್) ಅಪೊರಿಪ್ರೆಸರಿನೊಂದಿಗೆ ಸೇರಿಕೊಂಡು ಅದರ ನಿರೋಧಕ ಸಾಮಥ್ಯವನ್ನೇ ನಾಶಮಾಡುತ್ತದೆ. ಆಗ ನಿರ್ವಾಹಕದ ಮೇಲಿನ ನಿರ್ಬಂಧ ಹೋಗಿ ಅನುಕ್ರಮ ಸಂಕೇತದಂತೆ ಕಿಣ್ವದ ತಯಾರಿಕೆ ಆಗುವುದು. ಪರಮಾಣು ಬಾಂಬಿನ ಸ್ಫೋಟನೆಯಾದಾಗ ಬಿಡುಗಡೆಯಾಗುವ ಗ್ಯಾಮ ಕಿರಣಗಳು ಭ್ರೂಣದ ಜೀನುಗಳ ನಿಯಂತ್ರಣ ಭಾಗವನ್ನು ನಾಶ ಮಾಡಿದರೆ, ಹತೋಟಿ ತಪ್ಪಿ ಅಮಾನುಷ ಪೀಳಿಗೆಗಳಿಗೆ ಕಾರಣವಾಗಿರಬಹುದು.

ಅಲ್ಲೊಸ್ಟಿರಿಕ್ ನಿಯಂತ್ರಣ ಅಥವಾ ಕಿಣ್ವ ಅಣು ವಿನ್ಯಾಸ ಬದಲಾವಣೆ ಇನ್ನೊಂದೂ ಮಾರ್ಗ. ಈ ಮಾರ್ಗದಲ್ಲಿ ಕ್ರಿಯಾಸರಣಿಯ ಅಂತಿಮ ಉತ್ಪನ್ನ ಮೊದಲ ರಸಾಯನ ಕ್ರಿಯೆಯ ಕಿಣ್ವದ ಅಣುವಿನೊಂದಿಗೆ ಸೇರಿ ಅದರ ಅಣು ವಿನ್ಯಾಸವನ್ನು ಬದಲಾಯಿಸುವುದು. ಆದ್ದರಿಂದ ಕ್ರಿಯೆ ಮುಂದುವರಿಯುವುದಿಲ್ಲ. ಈ ಮಾರ್ಗಕ್ಕೆ ಉತ್ತಮ ಉದಾಹರಣೆ ಅಸ್ಪಾರ್ಟೇಟ್ ಟ್ರಾನ್ಸ್ ಕಾರ್ಬಮೈಲೇಸ್ ಎಂಬ ಕಿಣ್ವ. ಇದು ಅಖಿP ತಯಾರಿಕೆಯಲ್ಲಿ ಮೊದಲ ಹಂತವಾದ ಅಸ್ಪಾರ್ಟಿಕ್ ಆಮ್ಲ ಮತ್ತು ಕಾರ್ಬಮೈಲ್ ಫಾಸ್ಫೇಟನ್ನು ಒಂದುಗೂಡಿಸುತ್ತದೆ. ಈ ಕಿಣ್ವದ ಕ್ರಿಯಾಶಕ್ತಿಯನ್ನು ಅಖಿP ರಸಾಯನವಸ್ತು ಕಡಿಮೆ ಮಾಡುವುದು ಈ ಅಲ್ಲೊಸ್ಟಿರಿಕ್ ಮಾರ್ಗದಿಂದ.

ಜೀನುಗಳ ವಿಕೃತಿ (ಮ್ಯುಟೇಷನ್) ಪ್ರಕೃತಿಯಲ್ಲಿ ತಂತಾನೆ ಆಗುತ್ತಿರುತ್ತದೆ. ಆದರೆ ಅತಿನೇರಿಳೆ ಕಿರಣಗಳ ಎಕ್ಸ್ ಕಿರಣಗಳು ಪರಮಾಣು ಬಾಂಬಿನ ಸ್ಫೋಟನೆಯಾದ ಬಳಿಕ ಉಂಟಾಗುವ ಗ್ಯಾಮ ಕಿರಣಗಳು ಈ ವಿಕೃತಿಯನ್ನು ಹೆಚ್ಚಿಸುತ್ತವೆ. ಸಾಧಾರಣವಾಗಿ ಜೀನಿನ ಆಓಂ ಬಹಳ ಸ್ಥಿರವಾದುದು. ಬ್ಯಾಕ್ಟೀರಿಯಗಳಲ್ಲಿ ಒಂದು ಆಓಂ ಹತ್ತು ಕೋಟಿ ಬಾರಿ ದ್ವಿಗುಣವಾದಾಗಲೂ ಅದು ಬದಲಾಗುವ ಸಂಭಾವ್ಯತೆ ನೂರಕ್ಕೆ 50 ರಷ್ಟು ಎಂದು ಲೆಕ್ಕ ಹಾಕಿದ್ದಾರೆ. ಸ್ವಲ್ಪ ಬದಲಾವಣೆಗೊಂಡ, ಆದರೆ ಪೂರ್ಣನಾಶವಾಗದ, ಜೀನ್ ಮತ್ತೆ ದುರಸ್ತಿಯಾಗಲು ಮಾರ್ಗವಿರುವುದೇ ಇದರ ಕಾರಣವೆಂದು ನಂಬಲಾಗಿದೆ. ಕೆಲವು ಬ್ಯಾಕ್ಟೀರಿಯಗಳನ್ನು ಅತಿನೇರಿಳೆ ಕಿರಣಗಳಿಗೆ ಒಳಪಡಿಸಿದಾಗ ಅವುಗಳ ಜೀನಿನು ಆಓಂ ಯಲ್ಲಿರುವ ಥೈಮೀನ್ ಒಂಟಿಯಾಗಿರುವುದು ಬಿಟ್ಟು ಜೋಡಿಯಾಗುವುದು ಮತ್ತು ಅದು ಹೊಂದಿದ ಆಓಂ ಯ ಅಣು ವಿನ್ಯಾಸ ಬದಲಾವಣೆಯಾಗಿ, ಆ ಬ್ಯಾಕ್ಟೀರಿಯಗಳ ಬೆಳೆವಣಿಗೆ ನಿಂತುಹೋಗುವುದೆಂದು ಕಂಡು ಹಿಡಿದಿದ್ದಾರೆ. ಈ ಬ್ಯಾಕ್ಟೀರಿಯಗಳನ್ನು ಅನಂತರ ನೀಲಿ ಕಿರಣಗಳಿಗೆ ಒಳಪಡಿಸಿದರೆ ಈ ಬೇಡದ ಗುಣ ಹೋಗಿ ಆಓಂ ರಿಪೇರಿಯಾಗಿ ಬ್ಯಾಕ್ಟೀರಿಯಗಳು ಎಂದಿನಂತೆಯೇ ಬೆಳೆಯ ತೊಡಗುವುವು. ಇದೇ ರೀತಿ ಇನ್ನೂ ಕೆಲವು ರಿಪೇರಿ ಮಾರ್ಗಗಳು ಇವೆ. ಆದ್ದರಿಂದಲೇ ಪ್ರಕೃತಿಯಲ್ಲಿ ವಿಕೃತಿ ಅಪರೂಪ.

6 ಶಕ್ತಿ ವ್ಯವಹಾರ : ಎಲ್ಲ ರಸಾಯನವಸ್ತುಗಳಲ್ಲಿಯೂ ರಸಾಯನ ಶಕ್ತಿ ಉಂಟು. ಅಧಿಕಶಕ್ತಿಯುತ ವಸ್ತು ಕಡಿಮೆ ಶಕ್ತಿಯ ಇನ್ನೊಂದು ವಸ್ತುವಾಗಿ ಬದಲಾವಣೆಗೊಂಡಾಗ ಶಕ್ತಿ ಬಿಡುಗಡೆಯಾಗುತ್ತದೆ. ಪಿಷ್ಟ, ಗ್ಲೂಕೋಸ್, ಎಣ್ಣೆಯಲ್ಲಿನ ಗ್ಲಿಸರಾಲ್ ಮತ್ತು ಫ್ಯಾಟೀ ಆಮ್ಲ, ಪ್ರೋಟೀನುಗಳು ಉತ್ಕರ್ಷಣಗೊಂಡು ಇಂಗಾಲದ ಡೈಆಕ್ಸೈಡ್ ಆಗುವುದು ಗೊತ್ತಾದ ವಿಷಯ. ಆಹಾರ ವಸ್ತುಗಳಿಗೆ ಹೋಲಿಸಿದರೆ ಇಂಗಾಲದ ಡೈಆಕ್ಸೈಡಿನಲ್ಲಿ ಕಡಿಮೆ ಶಕ್ತಿ ಇರುವುದರಿಂದ ಆಹಾರ ವಸ್ತುಗಳ ಮತ್ತು ಇಂಗಾಲದ ಡೈಆಕ್ಸೈಡಿನ ಶಕ್ತಿವ್ಯತ್ಯಾಸ ಈ ಉತ್ಕರ್ಷಣ ಕ್ರಿಯೆಯಿಂದ ಬಿಡುಗಡೆ ಆಗುತ್ತದೆ. ಈ ಶಕ್ತಿಯನ್ನು ಕೋಶ ತನಗೆ ಬೇಕಾದ ರೂಪದಲ್ಲಿ ಹಿಡಿದಿಟ್ಟುಕೊಂಡು, ಬೇಕಾದ ಕಾರ್ಯಗಳಿಗಾಗಿ ಉಪಯೋಗಿಸಿಕೊಳ್ಳುತ್ತದೆ (ಚಿತ್ರ. 5). ವಿಶೇಷ ಫಾಸ್ಫೇಟುಗಳು ಈ ರೀತಿ ಶಕ್ತಿ ಹಿಡಿದಿಟ್ಟುಕೊಳ್ಳುವ ಶಕ್ತಿನಾಣ್ಯಗಳು. ಅವುಗಳಲ್ಲಿ ಅಡೆನೋಸೀನ್ ಟ್ರೈಫಾಸ್ಫೇಟ್ ಅಥವಾ ಂಖಿP (ಚಿತ್ರ 6) ಮುಖ್ಯವಾದುದು. ಇದರ ಅಣುವಿನಲ್ಲಿ ಮೂರು ಫಾಸ್ಫೇಟುಗಳೂ ಒಂದು ರೈಬೋಸ್ ಅಣು ಮತ್ತು ಅಡೆನೀನ್ ಎಂಬ ಪ್ಯೂರೀನೂ ಇವೆ. ಉಖಿP ಎಂಬ ಶಕ್ತಿನಾಣ್ಯದಲ್ಲಿ ಗ್ವಾನೀನ್ ಎಂಬ ಫ್ಯೂರೀನ್ ಮತ್ತು ಉಳಿದ ಅಖಿP, UಖಿP, ಖಿಖಿP ಮುಂತಾದವುಗಳಲ್ಲಿ ಅನುಕ್ರಮವಾಗಿ ಸೈಟೋಸೀನ್, ಯುರಾಸಿಲ್ ಮತ್ತು ಉಳಿದ ಥೈಮಿನ್ ಎಂಬ ಪಿರಿಮಿಡೀನ್ ಗುಂಪಿಗೆ ಸೇರಿದ ವಸ್ತುಗಳಿವೆ.

ಚಿತ್ರ-5

ಇವಲ್ಲದೆ ಕ್ರಿಯಾಟಿನ್ ಫಾಸ್ಫೇಟ್, ಆರ್ಜಿನೀನ್ ಫಾಸ್ಫೇಟ್ ಮತ್ತು ಅಸಿಟೈಲ್ ಫಾಸ್ಫೇಟುಗಳಲ್ಲಿಯೂ ಹೆಚ್ಚು ಶಕ್ತಿಯುಂಟು. ಅಂದರೆ ಒಂದು ಗ್ರಾಮ್ ಅಣು ತೂಕದಷ್ಟು ವಸ್ತುವನ್ನು ವಿಭಜಿಸಿ ಒಂದು ಫಾಸ್ಫೇಟನ್ನು ಬಿಡುಗಡೆ ಮಾಡಿದಾಗ ಬರುವ ಶಕ್ತಿ ಸುಮಾರು 8 ರಿಂದ 9 ಕಿಲೊಕ್ಯಾಲರಿಗಳು.

ಚಿತ್ರ-6

ಇವಲ್ಲದೆ ಕಡಿಮೆ ಶಕ್ತಿ ಪಡೆದಿರುವ ಫಾಸ್ಫೇಟುಗಳ ಗುಂಪಿಗೆ ನಿರ್ವಾಯು ಶರ್ಕರ ಪಥದ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಫಾಸ್ಫೇಟುಗಳು ಸೇರಿವೆ. ಇವುಗಳ ತಯಾರಿಕೆಗೆ ಸಹಜವಾಗಿಯೇ ಶಕ್ತಿ ಬೇಕು. ಈ ರೀತಿಯ ರಾಸಾಯನಿಕ ಕಾರ್ಯಗಳಿಗೆ ಎಂಡಾಗ್ರ್ಯಾನಿಕ್ ಕಾರ್ಯಗಳು ಎಂದು ಹೆಸರು. ಸಾಧಾರಣವಾಗಿ ಂಖಿP ಈ ಕಾರ್ಯಗಳಲ್ಲಿ ಶಕ್ತಿದಾತನಾಗಿ ಕೆಲಸ ಮಾಡಿ ಅದರ ಅಣು ಂಆP ಆಗುತ್ತದೆ. ಮತ್ತೆ ಅದರ ತಯಾರಿಕೆಗೆ ಕ್ರಿಯಾಟಿನ್ ಫಾಸ್ಫೇಟ್ ತನ್ನ ಶಕ್ತಿಯುತ ಫಾಸ್ಫೇಟನ್ನು ಕೊಡುತ್ತದೆ. ಂಖಿP ಹೆಚ್ಚು ಇದ್ದಾಗ ಅದರಿಂದ ಕ್ರಿಯಾಟಿವ್ ಫಾಸ್ಫೇಟಿನ ಮಟ್ಟ ಮೊದಲಿನಂತೆಯೇ ಆಗುತ್ತದೆ. ಆದ್ದರಿಂದ ಇದನ್ನು ಫಾಸ್ಫಜನ್ ಎಂದು ಕರೆಯುತ್ತಾರೆ. ಸಸ್ಯಗಳಲ್ಲಿ ಆರ್ಜಿನೀನ್ ಫಾಸ್ಪೇಟ್ ಈ ರೀತಿಯ ಕೆಲಸವನ್ನು ನಿರ್ವಹಿಸುತ್ತದೆ.

ಎಕ್ಸಾಗ್ರ್ಯಾನಿಕ್ ಕಾರ್ಯಗಳಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ. ಆಹಾರ ವಸ್ತುಗಳ ಉತ್ಕರ್ಷಣೆಯೂ ಒಂದು ಎಕ್ಸಾಗ್ರ್ಯಾನಿಕ್ ಕಾರ್ಯ. ಗ್ಲೂಕೋಸ್ ಮುಂತಾದವು ಹಂತಹಂತವಾಗಿ ಕಡೆಗೆ ಅಕ್ಸಿಜನ್ನಿನಿಂದ ಸಂಪೂರ್ಣವಾಗಿ ಉತ್ಕರ್ಷಣ ಹೊಂದಿ, ಅಂತಿಮ ಹಂತದ ಎಲೆಕ್ಟ್ರಾನ್ ಸಾಗಣೆಯಲ್ಲಿ ಬಿಡುಗಡೆಯಾದ ಶಕ್ತಿಯಿಂದ ಂಖಿP ಅಣುಗಳು ತಯಾರಾಗುತ್ತವೆ. ಈ ಂಖಿP ಸ್ನಾಯುವಿನಲ್ಲಿನ ಮೈಯೊಸಿನ್ನಿನೊಂದಿಗೆ ಸೇರಿ ಅದನ್ನು ಸಂಕುಚಿತಗೊಳಿಸಿ ಸ್ನಾಯುವಿನಿಂದ ಕಾರ್ಯ ಮಾಡಿಸುತ್ತದೆ. ದೇಹದ ಉಷ್ಣತೆಗೆ ಉಷ್ಣವನ್ನು ಕೊಡುವುದೂ ಎಂಡಾಗ್ರ್ಯಾನಿಕ್ ಕ್ರಿಯೆಗಳು ಸಾಧ್ಯವಾಗುವಂತೆ ಮಾಡುವುದೂ ಒತ್ತಡಕ್ಕೆ ವಿರುದ್ಧವಾಗಿ ವಸ್ತುಗಳನ್ನು ಸಾಗಿಸಲು ಬೇಕಾದ ಶಕ್ತಿಯನ್ನು ಒದಗಿಸುವುದೂ ಂಖಿP ಯ ಕೆಲಸ. ಮಿಂಚಿನ ಹುಳಗಳಲ್ಲಿ ಬೆಳಕು ಶಕ್ತಿಯನ್ನೂ, ವಿದ್ಯುತ್ ಈಲಿನಲ್ಲಿ ವಿದ್ಯುತ್ ಶಕ್ತಿಯನ್ನೂ ಉಂಟು ಮಾಡುವುದು ಕೂಡ ಈ ಂಖಿP ಯೇ. ಇದರಿಂದಲೇ ಪ್ರಾಣಿಗಳಲ್ಲಿನ ಶಕ್ತಿಯ ವಹಿವಾಟು ನಡೆಯುತ್ತದೆ.

ಜೀವಿಯ ಸಮಸ್ತ ಶಕ್ತಿಗಳ ಮೂಲ ಸೂರ್ಯನ ಶಕ್ತಿ. ಪ್ರಾಣಿಗಳಿಗೆ ಇದು ದೊರೆಯುವುದು ಸಸ್ಯಗಳ ಮುಖಾಂತರ. ಅವು ತಮ್ಮ ದ್ಯುತಿಸಂಶ್ಲೇಷಣ ಕಾರ್ಯದ ಮೂಲಕ, ಕಡಿಮೆ ಶಕ್ತಿ ಇರುವ ಇಂಗಾಲದ ಡೈಆಕ್ಸೈಡಿನಿಂದ ಹೆಚ್ಚು ಶಕ್ತಿಯಿರುವ ಪಿಷ್ಟವನ್ನು ತಯಾರಿಸುತ್ತವೆ. ಈ ಕಾರ್ಯಕ್ಕೆ ಶಕ್ತಿ ಸೂರ್ಯನ ಕಿರಣಗಳಿಂದ ದೊರೆಯುವುದು. ಕಾರ್ಬೊಹೈಡ್ರೇಟಿನಲ್ಲಿನ ಈ ಶಕ್ತಿ ಸೂರ್ಯನ ಕಿರಣಗಳಿಂದ ದೊರೆಯುವುದು. ಕಾರ್ಬೊಹೈಡ್ರೇಟಿನಲ್ಲಿನ ಈ ಶಕ್ತಿ ಜೀವಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ದೊರೆಯುತ್ತದೆ. ಒಂದು ಗ್ರಾಮ್ ಅಣು ತೂಕದ ಗ್ಲೂಕೋಸಿನಲ್ಲಿ ಸುಮಾರು 688 ಕಿಲೋಕ್ಯಾಲರಿಯಷ್ಟು ಶಕ್ತಿ ಉಂಟು. ಜೀವಿಗಳಲ್ಲಿನ ಶಕ್ತಿ ಸಂಚಯನಯಂತ್ರ ಒಂದು ಗ್ಲೂಕೋಸಿನ ಅಣುವಿನಿಂದ 6 ಂಖಿP ಅಣುಗಳನ್ನು ಅಂದರೆ ಸುಮಾರು 310 ಕಿಲೋ ಕ್ಯಾಲರಿಯಷ್ಟು ಶಕ್ತಿಯನ್ನು ಕೋಶಕ್ಕೆ ಂಖಿP ರೂಪದಲ್ಲಿ ಕೊಡುತ್ತದೆ. ಅಂದರೆ ಈ ಯಂತ್ರದ ಕ್ರಿಯಾಶಕ್ತಿ ಸುಮಾರು ನೂರಕ್ಕೆ 45ರಷ್ಟು ಎಂದಾಯಿತು.

7 ಅಣ್ವಕ ದೃಷ್ಟಿಯಿಂದ ವಿಕಾಸಪಥ : ವಿಕಾಶಪಥದ ಮೊದಲಲ್ಲಿ ಇರುವ ಏಕಾಣುಜೀವಿಗಳು, ಬೂಷ್ಟು ಮುಂತಾದವುಗಳಲ್ಲಿ ಇರುವ ಅನೇಕ ಚಯಾಪಚಯ ಮಾರ್ಗಗಳು ವಿಕಾಸಪಥದ ತುದಿಯಲ್ಲಿರುವ ಮಾನವನಲ್ಲಿಯೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಗ್ಲೂಕೋಸು ಪೈರುವೇಟ್ ಆಗುವಾಗಿನ ಅಪಚಯ ಕ್ರಿಯೆ. ಈ ಬದಲಾವಣೆಯಲ್ಲಿ ಯೀಸ್ಟಿನಲ್ಲಿ ಇರುವ ರಸಯನ ಹಂತಗಳ ಮಾರ್ಗವೇ ಸ್ನಾಯುವಿನಲ್ಲಿಯೂ ಇದೆ. ಅಂದರೆ ಜೀವಿ ವಿಕಾಸಪಥದಲ್ಲಿ ಮುಂದುವರೆದಿದ್ದರೂ ಸಾಕಷ್ಟು ಕಾರ್ಯದಕ್ಷತೆಯಿರುವ ಮೂಲಮಾರ್ಗವನ್ನು ಬದಲಾಯಿಸದೆ ಉಳಿಸಿಕೊಂಡಿರುತ್ತದೆ. ಆದ್ದರಿಂದಲೇ ಗ್ಲೂಕೋಸಿನ ಅಪಚಯಕ್ರಿಯೆಯ ಈ ಭಾಗವನ್ನು ವಿವರವಾಗಿ ಅಭ್ಯಸಿಸಲು ಯೀಸ್ಟ್ ಕೋಶಗಳನ್ನು ಬಳಸಿಕೊಳ್ಳುವುದು ಸಾಧ್ಯವಾಯಿತು. ಈ ರೀತಿಯ ಪರಿಸ್ಥಿತಿ ಜೀವರಸಾಯನವಿಜಾÐನದ ಸಂಶೋಧನೆಗೆ ಬಲು ಅನುಕೂಲವಾಗಿದೆ; ಇದಕ್ಕೆ ಬ್ಯಾಕ್ಟೀರಿಯ ಸಸ್ಯಗಳು ಮತ್ತು ಅನೇಕ ಪ್ರಾಣಿಗಳನ್ನು ಬಳಸಿಕೊಳ್ಳಲು ಶಕ್ಯವಾಗಿದೆ. ಮಾನವನನ್ನೇ ಪ್ರಯೋಗಪಶುವನ್ನಾಗಿ ಉಪಯೋಗಿಸಬೇಕಾಗಿದ್ದರೆ ಈ ಶಾಸ್ತ್ರ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಮಾನವನಿಗೆ ಮಾತ್ರ ಸಂಬಂಧ ಪಟ್ಟ ಜೀವರಸಾಯನವಿಜ್ಞಾನದ ಬೆಳೆವಣಿಗೆ ಬಹಳ ನಿಧಾನವಾಗಿರುವುದು ಈ ಕಾರಣದಿಂದಲೇ.
ಜೀವಿವಂಶಗಳು ಬೇರೆ ಬೇರೆಯಾಗಿ ಸೃಷ್ಟಿಯಾಗಲಿಲ್ಲ. ಅವು ಹಿಂದಿನ ರೂಪಗಳಿಂದ ಇಂದಿನ ರೂಪಗಳಿಗೆ ವಿಕಾಸವಾಗುತ್ತ ಹೊಸ ಪರಿಸ್ಥಿತಿಗೆ ಹೊಂದಿಕೊಂಡಿವೆ. ಹೀಗಾಗಿ ಹೊಸಹೊಸ ಜೀವಿವಂಶಗಳು ಕೂಡ ಹುಟ್ಟಿವೆ. ಇದು ಹೀಗೆ ನಡೆದಿದೆ ಎಂಬ ವಿವರಗಳು ಜೀವಿಗಳ ಜೀವರಸಾಯನ ವೃತ್ತಾಂತವನ್ನು ವ್ಯಾಸಂಗ ಮಾಡುವುದರಿಂದ ದೊರೆಯುತ್ತದೆ. ಯೀಸ್ಟ್ ಕೋಶಗಳು ಬೆಳೆಯಲು ಆವಶ್ಯಕವಾದ ಶಕ್ತಿಗಾಗಿ ಂಖಿP ಗಳನ್ನು ಅವು ತಯಾರಿಸಬೇಕು. ಈ ಉದ್ದೇಶಕ್ಕಾಗಿ ಅವು ಗ್ಲೂಕೋಸನ್ನು ಪೈರುವೇಟ್, ಅನಂತರ ಅಸಿಟಾಲ್ಡಿ ಹೈಡ್ ಕಡೆಗೆ ಈಥೈಲ್ ಆಲ್ಕೊಹಾಲ್ ಆಗಿ ಬದಲಾಯಿಸುತ್ತದೆ. ಸ್ನಾಯುವಿನಲ್ಲಿಯೂ ಗ್ಲೂಕೋಸಿನ ಬದಲಾವಣೆಯ ಉದ್ದೇಶವಾದರೂ ಂಖಿP ಗಲನ್ನು ತಯಾರಿಸುವುದೇ ಆಗಿದೆ. ಆದರೆ ವಿಕಾಸದ ಏಣಿಯನ್ನು ಹತ್ತಿದ ಪ್ರಾಣಿಗಳಲ್ಲಿ ಮತ್ತು ಮಾನವನಲ್ಲಿ ಪ್ರಕೃತಿ ಈ ಪೈರುವೇಟ್ ಲ್ಯಾಕ್ಟಿಕ್ ಆಮ್ಲವಾಗಲು ಅನುಕೂಲ ಮಾಡಿಕೊಟ್ಟು ಈಥೈಲ್ ಆಲ್ಕೊಹಾಲ್ ತಯಾರಿಕೆಯ ಶಕ್ತಿಯನ್ನು ಕಸಿದುಕೊಂಡಿದೆ. ಅಂತೂ ಈ ನಿರ್ವಾಯು ಶರ್ಕರ ಪಥ ಎಲ್ಲ ಜೀವಿಗಳಲ್ಲಿಯೂ ಒಂದೆ ಎಂಬುದು ಸ್ಪಷ್ಟ. ಮಾನವನಿಗೂ ಬ್ಯಾಕ್ಟೀರಿಯ ಬೂಷ್ಟುಗಳಿಗೂ ಬಾಹ್ಯದಲ್ಲಿ ಅಂತರ ಕಂಡರೂ ಜೀವರಸಾಯನ ದೃಷ್ಟಿಯಿಂದ ನಿಕಟ ಸಾಮೀಪ್ಯ ಉಂಟು.
ವಿಕಾಸಪಥದ ವಿವಿಧ ಹಂತಗಳಲ್ಲಿರುವ ಜೀವಿಗಳಲ್ಲಿ ಕ್ರಿಯಾ ದೃಷ್ಟಿಯಿಂದ ಈ ಸಾಮಾನ್ಯತೆ ಕಂಡರೂ ಕಾರ್ಯ ಜರಗಿಸುವ ವಸ್ತುಗಳಲ್ಲಿನ ಅಣುಗಳಲ್ಲಿ ಭೇದಗಳು ಕಂಡುಬಂದಿವೆ. ವಿವಿಧ ಪ್ರಾಣಿ, ಸಸ್ಯ ಮತ್ತು ಏಕಾಣುಜೀವಿಗಳಿಂದ, ಎಲೆಕ್ಟ್ರಾನ್ ಸಾಗಣೆಯಲ್ಲಿ ಪಾತ್ರವಹಿಸುವ ಸೈಟೋಕ್ರೋಮ್ ಅ ಯನ್ನು ಶುದ್ಧ ರೂಪದಲ್ಲಿ ಪಡೆದು ಈ ವಿಷಯವನ್ನು ಸಂಶೋಧನೆ ಮಾಡಿದ್ದಾರೆ. ಮನುಷ್ಯನ ಸೈಟೊಕ್ರೋಮ್ ಅ ಗೆ ಹೋಲಿಸಿದಾಗ ಅವುಗಳ ಅಮೈನೋ ಆಮ್ಲಗಳಲ್ಲಿ ವ್ಯತ್ಯಾಸವಿರುವುದು ತಿಳಿದು ಬಂದಿದೆ.; ನಾಯಿಯಲ್ಲಿ 11, ಕುದುರೆಯಲ್ಲಿ 12, ಕೋಳಿಯಲ್ಲಿ 13, ಟ್ಯೂನಾಮೀನಿನಲ್ಲಿ 21, ಗೋದಿಯಲ್ಲಿ 35, ಯೀಸ್ಟಿನಲ್ಲಿ 44. ವಿಕಾಸಪಥದಲ್ಲಿ ಹತ್ತಿರ ಇರುವ ಯೀಸ್ಟ್ ಮತ್ತು ನ್ಯೂರೊಸ್ಟಾರಾಗಳಲ್ಲಿ ಸೈಟೊಕ್ರೋಮ್ ಅ ಗಳಲ್ಲಿಯೆ 39 ಅಮೈನೋ ಆಮ್ಲಗಳ ಬದಲಾವಣೆಯಿದೆ. ಕಿಣ್ವದ ಪ್ರೋಟೀನಿನ ಅಣುಗಳಲ್ಲಿಯೂ ಈ ರೀತಿಯ ವ್ಯತ್ಯಾಸಗಳು ಕಂಡು ಬಂದಿವೆ. ಈಕೊಲೈ, ಯೀಸ್ಟ್ ಮತ್ತು ಮೊಲದ ಸ್ನಾಯುಗಳಲ್ಲಿರುವ ಫಾಸ್ಫೊಗ್ಲೂಕೊಮ್ಯಾಟೇಸ್ ಮತ್ತು ಟರಯೋಸ್ ಫಾಸ್ಫೇಟ್ ಡೀಹೈಡ್ರೊ ಜಿನೇಸುಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿನ ವಿವಿಧ ಅಮೈನೋ ಆಮ್ಲಗಳ ಪ್ರಮಾಣದಲ್ಲಿ ಬದಲಾವಣೆ ಕಂಡುಬಂದಿದೆ. ಆದರೆ ಈ ಕಿಣ್ವಗಲ ಅಣುಗಳಲ್ಲಿನ ಕ್ರಿಯಾಕ್ಷೇತ್ರ ಮಾತ್ರ ಎಲ್ಲದರಲ್ಲಿಯೂ ಒಂದೇ ಎಂಬುದು ಗೊತ್ತಾಗಿದೆ. ಪ್ರೋಟೀನುಗಳಲ್ಲಿನ ಅಮೈನೋ ಆಮ್ಲದ ಅನುಕ್ರಮತೆ ಅದರ ಜೀನನ್ನು ಅವಲಂಬಿಸಿರುವುದರಿಂದ ವಿಕಾಸ ಪಥದಲ್ಲಿ ಮೇಲೇರಿದಾಗ ಪ್ರಾಣಿಗಳ ಜೀನಿನಲ್ಲಿ ಬದಲಾವಣೆ ಸಾಧ್ಯ ಎಂದಾಯಿತು. ಕಿಣ್ವದ ಅಣುವಿನ ಕ್ರಿಯಾಕ್ಷೇತ್ರದಲ್ಲಿನ ಅಮೈನೋ ಆಮ್ಲಗಳ ಅನುಕ್ರಮತೆಯನ್ನು ನಿರ್ದಿಷ್ಟಿಸುವ ಜೀನಿಯ ಭಾಗದಲ್ಲಿ ಈ ಬದಲಾವಣೆ ಆದರೆ, ವಿಕಾಸಪಥದಲ್ಲಿ ಮುಂದುವರಿದ ಜೀವಿ, ತನ್ನ ಹಳೆಯ ಶಕ್ತಿಯನ್ನು ಕಳೆದುಕೊಂಡು ಆ ಕಾರ್ಯಗಳಿಗಾಗಿ, ಅಥವಾ ಅವುಗಳಿಂದ ಒದಗುವ ರಸಾಯನವಸ್ತುಗಳಿಗಾಗಿ, ವಿಕಾಸಪಥದಲ್ಲಿ ಹಿಂದಿರುವ ಜೀವಿಗಳನ್ನು ನಂಬಬೇಕಾಗುತ್ತದೆ. ಜೀವಸತ್ತ್ವಗಳ ಮತ್ತು ಆವಶ್ಯಕ ಅಮೈನೋ ಆಮ್ಲಗಳ ತಯಾರಿಕೆಯ ಶಕ್ತಿಯನ್ನು, ವಿಕಾಸಪಥದಲ್ಲಿ ಮುಂದುವರಿದ ಜೀವಿಗಳು ಈ ರೀತಿ ಕಳೆದುಕೊಂಡಿವೆ ಎಂದು ಕಾಣುತ್ತದೆ.

ವಿಕಾಸಪಥದಲ್ಲಿ ಜೀವಿ ಮುಂದುವರಿಯುವಾಗ ತಾನು ಜೀವಿಸಬೇಕಾದ ಬಾಹ್ಯ ಪರಿಸ್ಥಿತಿ ಬದಲಾಗಬಹುದು. ನೀರಿನಲ್ಲಿ ಇರುವುದು ಬಿಟ್ಟು ಭೂಮಿಯ ಮೇಲೆ ಜೀವಿಸಬೇಕಾಗಬಹುದು. ಆ ರೀತಿಯ ಸಂದರ್ಭದಲ್ಲಿ ವಿಕಾಸದ ಏಣಿಯನ್ನು ಏರಿದಾಗ ಹೊಸ ಹೊಸ ಚಯಾಪಚಯ ಮಾರ್ಗಗಳು ಹುಟ್ಟಿಕೊಳ್ಳಬಹುದು. ಇದಕ್ಕೆ ಉತ್ತಮವಾದ ಉದಾಹರಣೆ ಅಮೈನೋ ಆಮ್ಲಗಳ ಅಪಚಯ ಕ್ರಿಯೆ. ನೀರಿನಲ್ಲಿ ಜೀವಿಸುವ ಮೀನುಗಳು ಈ ಅಮೈನೋ ಆಮ್ಲಗಳಲ್ಲಿನ ಅಮೈನೋ ಗುಂಪನ್ನು ವಿಸರ್ಜಿಸುವುದು ಅಮೋನಿಯ ರೂಪದಲ್ಲಿ. ಮೀನು ನೀರಿನಲ್ಲಿಯೇ ಇರುವುದರಿಂದ ಮತ್ತು ನೀರಿನಲ್ಲಿ ಅಮೋನಿಯ ವಿಶೇಷವಾಗಿ ಕರಗುವುದರಿಂದ ಅದನ್ನು ಮೀನು ಕಳೆದುಕೊಳ್ಳುವುದು ಸುಲಭ. ಆದರೆ ಮನುಷ್ಯನಿಗೆ ಅದು ಸಾಧ್ಯವಿಲ್ಲ. ಅಮೋನಿಯವನ್ನು ರಕ್ತದ ಮೂಲಕ ಮೂತ್ರ ಜನಕಾಂಗಕ್ಕೆ ವರ್ಗಾಯಿಸುವಂತೆಯೇ ಇಲ್ಲ. ಏಕೆಂದರೆ ಇದು ಮಹಾವಿಷ. ರಕ್ತದಲ್ಲಿ ನೂರು ಮಿಲಿಲೀಟರಿಗೆ ಒಂದೆರಡು ಮೀಲಿಗ್ರಾಮಿನಷ್ಟು ಇದ್ದರೂ ಪ್ರಾಣಾಪಾಯಕಾರಿ. ಆದ್ದರಿಂದ ಅಮೋನಿಯವನ್ನು ನಿರಪಾಯಕಾರಿಯಾದ ಯೂರಿಯ ಮಾಡಲು ಏರ್ಪಾಡು ಮನುಷ್ಯನಲ್ಲಿ ಉಂಟು. ಈ ಯೂರಿಯ ನೀರಿನಲ್ಲಿ ಕರಗುವುದರಿಂದ ಮೂತ್ರ ಜನಕಾಂಗದ ಮೂಲಕ ಮೂತ್ರದಲ್ಲಿ ಹೋಗಲು ತಕ್ಕಗುಣ ಹೊಂದಿದೆ. ಹಕ್ಕಿಗಳಲ್ಲಿ ಈ ಮಾರ್ಗ ಸಾಧ್ಯವಿಲ್ಲ. ಏಕೆಂದರೆ ಅವು ಹೆಚ್ಚು ನೀರನ್ನು ದೇಹದಲ್ಲಿ ಇಟ್ಟುಕೊಂಡಲ್ಲಿ ಅವುಗಳ ಮೈ ಭಾರವಾಗಿ ಹಾರಲಾರವು. ಆದ್ದರಿಂದ ಹಕ್ಕಿಗಳಲ್ಲಿ ಅಮೋನಿಯವನ್ನು ಕಳೆದುಕೊಳ್ಳುವುದು. ನೀರಿನಿಲ್ಲಿ ಕರಗದ ಯೂರಿಕ್ ಆಮ್ಲದ ರೂಪದಲ್ಲಿ. ವಿಕಾಸ ಪಥದಲ್ಲಿ ಮುಂದುವರಿದಂತೆ ಅವುಗಳ ಕಣಕೇಂದ್ರಗಳಲ್ಲಿನ ಜೀನುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಹೇಗೆ ಆಯಿತು ಎಂಬುದು ಸ್ಪಷ್ಟವಿಲ್ಲ. ಮೊದಲು ಇದ್ದ ಜೀನುಗಳಿಂದ, ಯಾವುದೊ ಒಂದು ಸಂದರ್ಭದಲ್ಲಿ ಎರಡರಷ್ಟಾಗಿ ಹೆಚ್ಚಾಗಿ ತಯಾರಾದ ಜೀನುಗಳು ಬದಲಾವಣೆ ಹೊಂದಿ, ಜೀವಿಯಲ್ಲಿ ಹೊಸ ಜೀವಕ್ರಿಯೆಗಳಿಗೆ ಸಾಧ್ಯತೆಯಾಗಿರಬಹುದು. ಇದುದರಿಂದ ಜೀವಿ ತನ್ನ ಹೊಸ ಬಾಹ್ಯ ಪರಿಸ್ಥಿತಿಗೆ ಹೊಂದುಕೊಳ್ಳುವ ಶಕ್ತಿಯನ್ನು ಪಡೆಯುತ್ತವೆ.

ಜೀವರಸಾಯನ ವಿಜ್ಞಾನದ ವ್ಯಾಪ್ತಿ ಹಿರಿದು. ಈಗ ಇದೊಂದು ಮೂಲ ಶಾಸ್ತ್ರವಾಗಿದೆ. ಆದ್ದರಿಂದ ಇದರ ಸಂಬಂಧವಾದ ಲೇಖನಗಳು ಜೀವಶಾಸ್ತ್ರ, ಸಸ್ಯಶಾಸ್ತ್ರ, ವೈದ್ಯಶಾಸ್ತ್ರ, ಔಷಧಶಾಸ್ತ್ರ, ಕೃಷಿಶಾಸ್ತ್ರ, ಆಹಾರಶಾಸ್ತ್ರ, ಅನುವಂಶೀಯ ಶಾಸ್ತ್ರ ಮತ್ತು ಏಕಾಣುಜೀವಿಶಾಸ್ತ್ರ, ಬಟ್ಟಿಶಾಸ್ತ್ರ ಮುಂತಾದ ಜೀವ ಸಂಬಂಧದ ಎಲ್ಲ ಶಾಸ್ತ್ರಗಳಲ್ಲಿಯೂ ಬರುತ್ತವೆ.
(ಎ.ಎಸ್.ಆರ್.)

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ